ಮಡಿಕೇರಿ, ನ. ೧೫: ವಿದ್ಯಾರ್ಥಿ ನಿಲಯಗಳಲ್ಲಿ ಶುದ್ಧ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತ ಅಧಿಕಾರಿ ಅನಿಲ್ ಧಾವನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ನಿಲಯ ಪಾಲಕರು, ನಿಲಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳಿಗೆ ನಗರದ ಗಾಂಧಿ ಭವನದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ನಿಲಯಗಳಲ್ಲಿ ಕರ್ತವ್ಯ ನಿರ್ವಹಿಸುವವರು ದೈಹಿಕ ಶುಚಿತ್ವ ಮತ್ತು ಆರೋಗ್ಯದ ಕಡೆ ಗಮನಹರಿಸಬೇಕು. ತಯಾರಿಸಿದ ಆಹಾರವನ್ನು ಮುಚ್ಚಿಡುವುದು, ಕ್ರಿಮಿಕೀಟಗಳಿಂದ ಆಹಾರ ಕಲುಷಿತವಾಗದಂತೆ ಗಮನಹರಿಸುವುದು. ತಯಾರಿಸಿದ ಆಹಾರವನ್ನು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಬಳಸುವುದು, ಪ್ಯಾಕ್ ಮಾಡಿದ ಆಹಾರ ವಸ್ತುಗಳ ಲೇಬಲ್‌ಗಳಲ್ಲಿ ಗ್ರಾಹಕರಿಗೆ ಅಗತ್ಯವಾಗಿ ನೀಡಲೇಬೇಕಾದ ಮಾಹಿತಿ ಬಗ್ಗೆ ಖಾತರಿಪಡಿಸಿ ಕೊಳ್ಳಬೇಕು ಎಂದು ಅನಿಲ್ ಧಾವನ್ ಹೇಳಿದರು.

ಬಿಸಿಎಂ ಇಲಾಖೆಯ ಅಧಿಕಾರಿ ಪಿ.ಪಿ. ಕವಿತಾ ಮಾತನಾಡಿ, ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶುಚಿತ್ವದ ಆಹಾರ ನೀಡಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ವಿಭಾಗದ ಮಂಜುನಾಥ್, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ವ್ಯವಸ್ಥಾಪಕರಾದ ಶಿವಶಂಕರ, ಆರೋಗ್ಯ ಶಿಕ್ಷಣಾಧಿಕಾರಿ ಶ್ರೀನಾಥ್, ನಿಲಯ ಮೇಲ್ವಿಚಾರಕರಾದ ಶ್ರೀಕಾಂತ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು, ಇತರರು ಇದ್ದರು.