ಸಿದ್ದಾಪುರ, ನ. ೧೬: ಶಾಲಾ ಮಕ್ಕಳ ಹಾಗೂ ತೋಟ ಕಾರ್ಮಿಕರ ಸುರಕ್ಷತೆಗಾಗಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ಭದ್ರತೆಯನ್ನು ಹಾಗೂ ವಾಹನದ ವ್ಯವಸ್ಥೆಯನ್ನು ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಕೈಗೊಂಡಿದ್ದಾರೆ. ತಿತಿಮತಿ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ - ಬಾಣಂಗಾಲ ಗ್ರಾಮದ ಚೌಡಿಕಾಡು, ತೂಪನಕೊಲ್ಲಿ, ಮಠ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮರಿಯಾನೆಗಳು ಸೇರಿದಂತೆ ೪೦ಕ್ಕೂ ಅಧಿಕ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ. ಅಲ್ಲದೆ, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಹಾಡಹಗಲೇ ಕಾಡಾನೆಗಳು ಸುತ್ತಾಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಹಾಗೂ ಶಾಲಾ - ಕಾಲೇಜುಗಳಿಗೆ ತೆರಳಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸುವ ಮೂಲಕ ಕಾಡಿಗಟ್ಟಲು ಪ್ರಯತ್ನಿಸಿದರೂ ಫಲ ದೊರೆಯುತ್ತಿಲ್ಲ.

ಆನೆ - ಮಾನವ ಸಂಘರ್ಷ ನಡೆಯದಂತೆ ಇದೀಗ ಮುನ್ನೆಚ್ಚರಿಕೆಯ ಕ್ರಮವಾಗಿ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎ.ಸಿ.ಎಫ್. ಗೋಪಾಲ್ ಮಾರ್ಗದರ್ಶನದಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ಹಾಗೂ ಉಪವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಅವರ ನೇತೃತ್ವದಲ್ಲಿ ಕಾಡಾನೆಗಳು ಹೆಚ್ಚಾಗಿ ಇರುವ ಪ್ರದೇಶಗಳ ಕಾಫಿ ತೋಟಗಳ ಕಾರ್ಮಿಕರನ್ನು ಸಭೆ ನಡೆಸಿ ಒಗ್ಗೂಡಿಸಿ ಅವರಿಗೆ ಎಚ್ಚರಿಕೆ ವಹಿಸುವಂತೆ ತಿಳುವಳಿಕೆ ನೀಡಲಾಗಿದೆ. ಇದೀಗ ಕಾಫಿ ತೋಟಗಳಲ್ಲಿ ಕಾಫಿ ಹಣ್ಣಾಗಿದ್ದು, ಕಾಡಾನೆಗಳ ಕಾರ್ಯಾಚರಣೆ ನಡೆಸಿದಲ್ಲಿ ಫಸಲುಗಳು ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆರ್.ಆರ್.ಟಿ. ತಂಡ - ಆನೆಕಾರ್ಯಪಡೆಯ ಸಿಬ್ಬಂದಿಗಳು ಕಾರ್ಮಿಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಗಸ್ತು ತಿರುಗುತ್ತಿದ್ದಾರೆ. ಶಾಲಾ - ಕಾಲೇಜುಗಳಿಗೆ ತೆರಳುವ ಮಕ್ಕಳನ್ನು ಅರಣ್ಯ ಇಲಾಖೆಗೆ ಸೇರಿದ ವಾಹನದಲ್ಲಿ ಸಂಜೆ ಹಾಗೂ ಬೆಳಿಗ್ಗೆ ಸುರಕ್ಷಿತವಗಿ ಕರೆತಂದು ಬಸ್ ನಿಲ್ದಾಣಕ್ಕೆ ಹಾಗೂ ಮನೆಗಳಿಗೆ ಬಿಡಲಾಗುತ್ತಿದೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-ವಾಸು.