ಮಡಿಕೇರಿ, ನ. ೧೬: ಕೊಡಗು-ಕೇರಳ ಗಡಿಭಾಗದ ಕರಿಕೆ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿAದ ಚಿರತೆ ನಿರಂತರವಾಗಿ ದಾಳಿ ಮಾಡುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಚಿರತೆ ಸೆರೆಗೆ ಆಗ್ರಹಿಸಿ ಕರಿಕೆ ಗ್ರಾ.ಪಂ. ಅಧ್ಯಕ್ಷ ಎನ್. ಬಾಲಚಂದ್ರನ್ ನಾಯರ್ ಮಡಿಕೇರಿಯ ಅರಣ್ಯ ಭವನದಲ್ಲಿ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಚ್ಚೆಪಿಲಾವ್, ದೊಡ್ಡಚೇರಿ, ಪಳ್ಳಿಕಳ ಮತ್ತಿತರ ಕಡೆ ಕಳೆದ ಒಂದು ತಿಂಗಳಿನಿAದ ಚಿರತೆ ಸಂಚಾರ ಕಂಡು ಬಂದಿದೆ. ಆರಕ್ಕೂ ಹೆಚ್ಚು ಸಾಕು ನಾಯಿಗಳನ್ನು ಚಿರತೆ ತಿಂದು ಹಾಕಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕರು ವಾಸಿಸುವ ಪ್ರದೇಶದ ಸಾಕು ನಾಯಿಗಳನ್ನೇ ಗುರಿ ಮಾಡಿ ಚಿರತೆ ದಾಳಿ ನಡೆಸುತ್ತಿದೆ. ಈ ಬೆಳವಣಿಗೆಯಿಂದ ಜನ ಆತಂಕಗೊAಡಿದ್ದು, ಮನೆಯಿಂದ ಹೊರಗೆ ಬರುವುದೇ ಕಷ್ಟವಾಗಿದೆ. ಗ್ರಾಮಸ್ಥರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ ಎಂದು ಬಾಲಚಂದ್ರನ್ ನಾಯರ್ ಅರಣ್ಯಾಧಿಕಾರಿಗಳಿಗೆ ವಿವರಿಸಿದರು.

ತಾವು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಜನವಸತಿ ಪ್ರದೇಶದಲ್ಲೇ ಚಿರತೆ ಹೆಜ್ಜೆ ಗುರುತುಗಳು ಗೋಚರಿಸಿವೆ. ಪಕ್ಕದಲ್ಲೇ ಅಂಗನವಾಡಿ ಕೇಂದ್ರ ಕೂಡ ಇದ್ದು, ಆತಂಕ ಮೂಡಿದೆ. ನಿತ್ಯ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಸಂಚರಿಸುವ ಪ್ರದೇಶದಲ್ಲೇ ಚಿರತೆ ಓಡಾಡುತ್ತಿದ್ದು, ಅನಾಹುತ ಸಂಭವಿಸುವ ಮೊದಲು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು.