ಕಣಿವೆ, ನ. ೧೬: ೮೪ ಜೀವ ರಾಶಿಗಳ ಪೈಕಿ ಪವಿತ್ರ ಜೀವಾತ್ಮ ದೊಂದಿಗೆ ಜನಿಸಿರುವ ಮಾನವರು ಉತ್ತಮವಾದ ಜೀವನವನ್ನು ಕಟ್ಟುವ ಮೂಲಕ ದೈವತ್ವಕ್ಕೇರಬೇಕೆಂದು ಅರಸೀಕೆರೆಯ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕರೆಕೊಟ್ಟರು.
ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದಲ್ಲಿ ಕೈಲಾಸನಾಥ ಹಾಗೂ ಲಕ್ಷಿö್ಮ ರಂಗನಾಥ ದೇವರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಧಾರ್ಮಿಕ ಪ್ರವಚನ ನೀಡಿದ ಶ್ರೀಗಳು, ಶರೀರ ಎಂಬ ಬಂಡಿಯಲ್ಲಿ ತುಂಬಿರುವ ಮೋಸ, ಕೋಪ, ಅನ್ಯಾಯ, ದ್ವೇಷ ಹಾಗೂ ಅಸೂಯೆಗಳನ್ನು ಕಿತ್ತೆಸೆದು ಪರಸ್ಪರ ಪ್ರೀತಿ, ಸ್ನೇಹ ಗೌರವಗಳಿಂದ ಸುಂದರ ಬದುಕು ನಡೆಸಬೇಕಿದೆ.
ಒಂದು ಮರ ನೂರು ವರ್ಷ ಭೂಮಿ ಮೇಲೆ ಬೆಳೆದು ಮನುಷ್ಯರಿಗೆ ಪರಿಶುದ್ಧ ಆಮ್ಲಜನಕವನ್ನು ನೀಡುತ್ತದೆ. ನಂತರ ಅದನ್ನು ಕಡಿದುರುಳಿಸಿದ ಬಳಿಕವೂ ಮನೆಗೆ ತೊಲೆಯಾಗಿ ನೂರು ವರ್ಷ ಬಾಳುತ್ತದೆ. ಆದರೆ ಮಣ್ಣಲ್ಲಿ ಮಣ್ಣಾಗುವ, ಬೆಂದು ಬೂದಿ ಯಾಗುವ ಈ ದೇಹ ಶಾಶ್ವತವಲ್ಲ ಎಂದರು ಶ್ರೀಗಳು. ಮನುಷ್ಯ ಆ ಜಾತಿ ಈ ಜಾತಿ ಎಂದು ಕಿತ್ತಾಡಿದರೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಹಾಗಾಗಿ ಪರಸ್ಪರ ಮನುಷ್ಯರೆಲ್ಲರೂ ಮಾನವ ಪ್ರೀತಿಯಿಂದ ಬದುಕಬೇಕು ಎಂದು ಹೇಳಿದ ಶ್ರೀಗಳು, ಆಯಾಯ ಧರ್ಮಗಳ ಮಂದಿ ಹಿರಿಯರು ಹಾಕಿ ಕೊಟ್ಟ ಮಠ, ಮಂದಿರಗಳ ಮೂಲಕ ಭಕ್ತಿ ಹಾಗೂ ಧರ್ಮ ಮಾರ್ಗದಲ್ಲಿ ನಡೆಯಬೇಕೆಂದು ಕರೆ ನೀಡಿದರು.
ಈ ಸಂದರ್ಭ ಗ್ರಾಮದ ಹಿರಿಯರಾದ ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಟಿ.ಡಿ. ಗಣೇಶ್, ಉದ್ಯಮಿ ಜ್ಞಾನೇಶ್, ಲಿಂಗರಾಜು, ಪ್ರೊ. ಟಿ.ಜಿ. ಚಂದ್ರಶೇಖರ್, ನರೇಂದ್ರನಾಥ್, ವಿರೂಪಾಕ್ಷ, ಟಿ.ಎಸ್. ಚಂದ್ರಶೇಖರ್, ಶಿಕ್ಷಕರಾದ ರಮೇಶ್, ಬಸವರಾಜು, ರಾಜಶೇಖರ, ಸುಂದರೇಶ್ ಹಾಜರಿದ್ದರು.