ಮಡಿಕೇರಿ, ನ. ೧೬: ಸುಸ್ಥಿರ ಕಾಫಿ ಉತ್ಪಾದನೆಗಾಗಿ ಅತ್ಯುತ್ತಮ ಕೃಷಿ ಪದ್ಧತಿಗಳ ಕುರಿತು ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಾಗಾರವು ಗೋಣಿಕೊಪ್ಪಲು ಕಾಫಿ ಮಂಡಳಿ ಹಾಗೂ ಸಕ್ಡೆನ್ ಕಾಫಿ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಉಪ ನಿರ್ದೇಶಕರಾದ ಡಾ. ಕೆ. ಶ್ರೀದೇವಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಸುಸ್ಥಿರ ಕಾಫಿ ಉತ್ಪಾದನೆಗಾಗಿ ಅತ್ಯುತ್ತಮ ಕೃಷಿ ಪದ್ಧತಿಗಳನ್ನು ಬೆಳೆಗಾರರು ಅಳವಡಿಸಿಕೊಳ್ಳಲು ಪಾಲಿಸಬೇಕಾದ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.

ಕಾಫಿ ಮಂಡಳಿಯ ವಿಜ್ಞಾನಿ ಡಾ. ಎಸ್. ಎ. ನದಾಫ್ ಅವರು ಸಮಗ್ರ ಪೋಷಕಾಂಶ ನಿರ್ವಹಣೆ ಕಾಫಿ ಬೆಳೆಯಲ್ಲಿ ಅತಿ ಅವಶ್ಯಕ ಹಾಗೂ ಅದರ ಅವಶ್ಯಕತೆಯ ಬಗ್ಗೆ ವಿವರಿಸಿದರು ಹಾಗೂ ರಸಗೊಬ್ಬರಗಳನ್ನು ಕಾಫಿ ಗಿಡಗಳಿಗೆ ಮಣ್ಣಿನ ಮತ್ತು ಎಲೆಗಳ ಮೇಲೆ ಸಿಂಪಡಣೆ ಮಾಡುವ ಮೂಲಕ ಪೋಷಕಾಂಶಗಳನ್ನೂ ಪೂರೈಸಬಹುದೆಂದು ತಿಳಿಸಿದರು. ಕಾಫಿಯಲ್ಲಿ ಸಸ್ಯಮೂಲ ಸಂವರ್ಧನೆ ಮತ್ತು ಕಾಫಿ ಕಸಿ ಮಾಡುವ ಬಗ್ಗೆ ಡಾ. ನಾಗರಾಜ ಗೋಕಾವಿ ಅವರು ಬೆಳೆಗಾರರಿಗೆ ಮಾಹಿತಿ ನೀಡಿದರು. ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ಮುಖಾರೀಬ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕಾಫಿ ಬೆಳೆಗಾರರಿಗೆ ಕಾಫಿ ಗಿಡವನ್ನು ನೆಟ್ಟ ನಂತರದ ಕಾಫಿ ಗಿಡಗಳಿಗೆ ಆರೈಕೆ, ನೀರಾವರಿ ನಿರ್ವಹಣೆ, ಕಾಫಿ ಕೃಷಿ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಕ್ಡೆನ್ ಕಾಫಿಯ ಪ್ರಾಜೆಕ್ಟ್ ಮ್ಯಾನೇಜರ್ ರಥನ್ ರವರು ಕೊಡಗಿನಲ್ಲಿ ಸಕ್ಡೆನ್ ಕಾಫಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಭುವನೇಶ್ವರಿ ವಂದಿಸಿದರು.

ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮ್ಮಣ್ಣಿ, ಸದಸ್ಯರಾದ ಕಾಟಿಮಾಡ ಶರಿನ್ ಮುತ್ತಣ್ಣ, ಚೆಕ್ಕೆರ ಸೂರ್ಯ ಅಯ್ಯಪ್ಪ, ಪಡಿಞರಂಡ ಕವಿತ ಪ್ರಭು, ಅಳಮೆಂಗಡ ಪವಿತ, ಕಾಫಿ ಬೆಳೆಗಾರರಾದ ಅಳಮೇಂಗಡ ಬೋಸ್ ಮಂದಣ್ಣ, ಮುಕ್ಕಾಟ್ಟಿರ ಪೂಣಚ್ಚ, ಮುಕ್ಕಾಟಿರ ಪ್ರಿನ್ಸ್ ಪೊನ್ನಪ್ಪ, ಮೇಚಂಡ ಸೋಮಯ್ಯ, ಕೊಟ್ಟಂಗಡ ಮಧು, ಮತ್ತಿತರ ಬೆಳೆಗಾರರು ಭಾಗವಹಿಸಿದ್ದರು.