ಮಡಿಕೇರಿ, ನ. ೧೬: ಇತ್ತೀಚಿನ ದಿನಗಳಲ್ಲಿ ಅಸುರಕ್ಷಿತ ಆಹಾರ ಪದಾರ್ಥಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಅಸುರಕ್ಷಿತ ಆಹಾರ ಪದಾರ್ಥಗಳ ಸೇವೆನೆಯಿಂದ ಮಾನವರ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುವ ಹಾಗೂ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ.

ಹೊಲದಿಂದ ತಟ್ಟಿಯವರೆಗೆ ಸುರಕ್ಷಿತ ಆಹಾರ ಎಂಬ ಕಲ್ಪನೆ ಯೊಂದಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಕರ್ತವ್ಯ ನಿರ್ವಹಿಸುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಮತ್ತು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಆಯುಕ್ತಾಲಯ, ಬೆಂಗಳೂರು ರವರ ಸೂಚನೆ ಮೇರೆಗೆ ಪ್ರತೀ ಮಾಹೆಯಲ್ಲಿ ಒಂದೊAದು ಆಹಾರ ಪದಾರ್ಥಗಳನ್ನು ಗುರಿಯಾಗಿಟ್ಟು ಕೊಂಡು ಪ್ರಾಧಿಕಾರವು ವಿಶ್ಲೇಷಣೆ ಯನ್ನು ನಡೆಸಲಾಗುತ್ತಿದೆ ಮತ್ತು ಈ ಬಗ್ಗೆ ಪತ್ರಿಕೆ ಮಾದ್ಯಮಗಳಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಆಹಾರ ಪದಾರ್ಥಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಖರೀದಿ ಮಾಡುವಾಗ ಎಫ್.ಎಸ್.ಎಸ್.ಎ. ನೋಂದಣಿ-ಪರವಾನಗಿ ನಂ. ಇರುವ ಹಾಗೂ ಪದಾರ್ಥದ ತಯಾರಿಕಾ ದಿನಾಂಕ, ಬಳಕೆಯ ನಿಗದಿತ ಸಮಯ ಇವುಗಳನ್ನು ಪರೀಕ್ಷಿಸಿಕೊಂಡು ಪದಾರ್ಥಗಳನ್ನು ಖರೀದಿಸುವುದು ಒಳ್ಳೆಯದು.

ಆಕರ್ಷಣೆಗಾಗಿ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳನ್ನು ಸೇರಿಸುತ್ತಿದ್ದು ಇಂತಹ ಆಹಾರ ಪದಾರ್ಥಗಳ ನಿರಂತರ ಸೇವನೆ ಯಿಂದ ಆನೇಕ ಖಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತದೆ.

ಆದ್ದರಿಂದ ಸಾರ್ವಜನಿಕರು ಇಂತಹ ಆಹಾರ ಪರ್ದಾಥಗಳನ್ನು ಬಳಸದಂತೆ ಮತ್ತು ಜಿಲ್ಲೆಯಲ್ಲಿ ರಸ್ತೆಬದಿಯಲ್ಲಿ ಯಾವುದೇ ಲೇಬಲಿಂಗ್ ಇಲ್ಲದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಲ್ಲಿ (ಉದಾ ಲೇಬಲಿಂಗ್ ಸರಿಯಿಲ್ಲದ ಜೇನು, ತಿಂಡಿ ತಿನಿಸು ಹಾಗೂ ಚಾಕೋಲೇಟ್ ಮತ್ತಿತರ ಆಹಾರ ಪದಾರ್ಥ)ಗಳನ್ನು ಖರೀದಿಸದಂತೆ ಮತ್ತು ಸೇವಿಸದೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿ ಡಾ. ಅನಿಲ್ ಧಾವನ್ ಇ. ತಿಳಿಸಿದ್ದಾರೆ.