ಮಡಿಕೇರಿ, ನ. ೧೬: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಸಹಕಾರ ಇಲಾಖೆ, ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಯುಕ್ತಾಶ್ರಯದಲ್ಲಿ ೭೧ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ದಿನಾಚರಣೆಯನ್ನು ಮರಗೋಡು ಪ್ಯಾಕ್ಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ, ೧೯೦೫ ರಲ್ಲಿ ಗದಗಿನ ಕಣಗಿನಹಾಳ ಗ್ರಾಮದಲ್ಲಿ ಶಿದ್ದನಗೌಡ ಸಂಣರಾಮನಗೌಡ ಪಾಟೀಲರು ಪ್ರಪ್ರಥಮ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವುದರ ಮೂಲಕ ಪ್ರಾರಂಭಗೊAಡ ಕ್ರಾಂತಿ ಇಂದು ಎಲ್ಲಾ ವಿಧಧ ಸಹಕಾರ ಸಂಘವನ್ನು ಸ್ಥಾಪಿಸುವಷ್ಟರ ಮಟ್ಟಿಗೆ ಬೆಳೆದಿದೆ. ಕೊಡಗು ಜಿಲ್ಲೆಯಲ್ಲಿಯೂ ಸಹಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ರಾಜ್ಯಕ್ಕೆ ಮಾದರಿಯಾಗಿದೆ. ೧೯೦೫ ರಲ್ಲಿಯೇ ಶಾಂತಳ್ಳಿಯ ತಲ್ತರೆ ಶೆಟ್ಟಳ್ಳಿಯಲ್ಲಿ ಪ್ರಥಮ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿ ರೈತರ ಹಾಗೂ ಬಡವರ ಏಳಿಗೆಗಾಗಿ ಶ್ರಮಿಸಲಾಯಿತು. ಸಹಕಾರ ಕ್ಷೇತ್ರದಲ್ಲಿ ಕೊಡಗಿನ ಪಿ.ಐ. ಬೆಳ್ಯಪ್ಪ, ಪಿ.ಎಂ. ಚಂಗಪ್ಪ, ಸಿ.ಎಂ. ಪೂಣಚ್ಚರವರ ಕೊಡುಗೆ ಅಪಾರ. ಅದರಲ್ಲೂ ಪಿ.ಐ. ಬೆಳ್ಯಪ್ಪರವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸ್ಥಾಪನೆಗೆ ಕಾರಣೀಕರ್ತರಾಗಿದ್ದರು ಎಂಬುದು ಗಮನಾರ್ಹ ಎಂದರು. ಸಹಕಾರ ಸಂಘಗಳು ಡಿಜಿಟಲೀಕರಣ ಗೊಳಿಸುವತ್ತ ಸರ್ಕಾರವು ಗಮನ ಹರಿಸುತ್ತಿದ್ದು, ಆ ಮೂಲಕ ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ಪ್ರೋತ್ಸಾಹಿಸುತ್ತಿದೆ. ಸಂಘಗಳ ಮೂಲಕ ಗ್ರಾಮಮಟ್ಟದಲ್ಲಿನ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕಾರ್ಯಕ್ರಮ ರೂಪಿಸಿದೆ ಎಂದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹೊಸೂರು ಜೆ. ಸತೀಶ್ ಕುಮಾರ್, ಜಿಲ್ಲೆಯಲ್ಲಿ ಅನೇಕ ಸಹಕಾರ ಸಂಘಗಳು ಸ್ಥಾಪಿತವಾಗಿ ಶತಮಾನೋತ್ಸವ ಪೂರೈಸಿವೆ. ಅದರಲ್ಲಿ ಭಾಗಮಂಡಲ ಪ್ಯಾಕ್ಸ್, ಮರಗೋಡು ಪ್ಯಾಕ್ಸ್ ಸಹ ಒಂದು. ಇಂದಿಗೂ ಈ ಸಂಘಗಳು ಹಲವು ವಿನೂತನ ಯೋಜನೆಗಳನ್ನು ಸದಸ್ಯರ ಹಿತದೃಷ್ಟಿಯಿಂದ ಜಾರಿಗೊಳಿಸಿ ಸೈ ಎನಿಸಿಕೊಂಡಿದೆ. ಅಂತೆಯೇ ರಾಜ್ಯದಲ್ಲಿಯೇ ವಿನೂತನ ಎಂಬAತೆ ಸಹಕಾರ ದವಸ ಭಂಡಾರಗಳು ಜಿಲ್ಲೆಯಲ್ಲಿ ಮಾತ್ರ ಇದ್ದು, ಇವುಗಳು ಭತ್ತದ ಮೂಲಕ ಕಾರ್ಯನಿರ್ವಹಿಸುತ್ತಿರುವುದನ್ನು ವಿವಿಧೊದ್ಧೇಶ ಸಹಕಾರ ಸಂಘವಾಗಿ ಮಾರ್ಪಾಡು ಮಾಡಲಾಗಿದೆ. ರೈತರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ, ಜೇನು ಮಾರಾಟ ಸಹಕಾರ ಸಂಘ, ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘಗಳನ್ನು ಹಿರಿಯ ಸಹಕಾರಿಗಳು ಸ್ಥಾಪಿಸಿದ್ದು, ಅವರ ಮುಂದಾಲೋಚನೆ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರು ಹಾಗೂ ಮರಗೋಡು ಪ್ಯಾಕ್ಸ್ನ ಅಧ್ಯಕ್ಷ ಕಾಂಗೀರ ಎನ್. ಸತೀಶ್ ಮಾತನಾಡಿ, ಪ್ರಸ್ತುತ ಮರಗೋಡು ಪ್ಯಾಕ್ಸ್ ವತಿಯಿಂದ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದ್ದು ಸಭಾಂಗಣವನ್ನು ಸಮಾರಂಭಗಳಿಗೆ ಬಾಡಿಗೆ ನೀಡುವುದರ ಮೂಲಕ ಹಾಗೂ ಇನ್ನಿತರೆ ಯೋಜನೆಗಳನ್ನು ಜಾರಿಗೊಳಿಸುತ್ತಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.

ಸಹಕಾರ ಸಪ್ತಾಹದಲ್ಲಿ ‘ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ವಿಷಯದ ಕುರಿತು ಕೆ.ಐ.ಸಿ.ಎಂ.ನ ಪ್ರಾಂಶುಪಾಲರಾದ ಡಾ. ಆರ್.ಎಸ್. ರೇಣುಕಾ ಉಪನ್ಯಾಸ ನೀಡಿದರು.

ಸಂಘದ ಮಾಜಿ ಅಧ್ಯಕ್ಷರುಗಳು ಹಾಗೂ ಹಿರಿಯ ಸಹಕಾರಿಗಳಾದ ಚೆರಿಯಮನೆ ವೇಣು, ಕುಕ್ಕೆರ ಸುಬ್ಬಯ್ಯ, ಬೊಳ್ಳೂರು ಶ್ರೀನಿವಾಸ್, ಮಳ್ಳಂದಿರ ಶೇಷಗಿರಿ, ಬಲ್ಲಚಂಡ ಕಾವೇರಪ್ಪ, ಉದಿಯಂಡ ಮುತ್ತಪ್ಪ, ನಂದೇಟಿರ ಗಣಪತಿ, ತೋಟಂಬೈಲು ಪಾರ್ವತಿರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎನ್.ಎ. ರವಿ ಬಸಪ್ಪ, ಬಿ.ಎ. ರಮೇಶ್ ಚಂಗಪ್ಪ, ಕೆ.ಎಂ. ತಮ್ಮಯ್ಯ, ಪಿ.ಬಿ. ಯತೀಶ್, ಎನ್.ಎ. ರ‍್ಯಾಲಿ ಮಾದಯ್ಯ, ವಿ.ಕೆ. ಅಜಯ್ ಕುಮಾರ್, ಮರಗೋಡು ಪ್ಯಾಕ್ಸ್ನ ಉಪಾಧ್ಯಕ್ಷ ಎ.ಕೆ. ಕಾವೇರಪ್ಪ, ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರೆ, ಮರಗೋಡು ಪ್ಯಾಕ್ಸ್ನ ನಿರ್ದೇಶಕರಾದ ತೋರೆರ ಕಾರ್ಯಪ್ಪರವರು ಸ್ವಾಗತಿಸಿ, ಪ್ಯಾಕ್ಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್ ವಂದಿಸಿದರು.