ದಕ್ಷಿಣ ಕೊಡಗಿನ ಅತೀ ಹಳೆಯ ಶಾಲೆ ಎನಿಸಿರುವ ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಇದೀಗ ಜರುಗುತ್ತಿದೆ. ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿವೆ. ಈಗಾಗಲೇ ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಾನು ಈ ಶಾಲೆಯಲ್ಲಿ ಈ ಹಿಂದೆ ಓದಿರುವುದನ್ನು ಜ್ಞಾಪಿಸಿಕೊಂಡು ನೂತನ ಸಭಾಂಗಣಕ್ಕೆ ರೂ. ೧೫ ಲಕ್ಷ ನೀಡಿದ್ದಾರೆ.

ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಅವರು ರೂ. ೬ ಲಕ್ಷ ನೀಡಿದ್ದು ಹಾಗೂ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರು ರೂ. ೧ ಲಕ್ಷ ನೀಡುವ ವಾಗ್ದಾನ ನೀಡಿದ್ದಾರೆ.

ಈ ನಡುವೆ ೨೦೧೮ರ ಜಲ ಪ್ರವಾಹ ಸಂದರ್ಭ ಮಾಯಮುಡಿ ಶಾಲೆಯ ತರಗತಿ ಕೊಠಡಿಗಳು ಜೀರ್ಣವಾಗಿ ಬೀಳುವ ಸ್ಥಿತಿಯಲ್ಲಿ ದ್ದುದನ್ನು ಗಮನಿಸಿ ರಾಜ್ಯದ ಒಸಾಟ್ ಸಂಸ್ಥೆಯು ನೂತನ ಕೊಠಡಿಗಳನ್ನು ನಿರ್ಮಿಸಲು ರೂ. ೪೦ ಲಕ್ಷ ಹಣವನ್ನು ಸಂಗ್ರಹಿಸಿ ನೀಡಿರುವುದು ಸ್ಮರಣೀಯ. ಒಸಾಟ್ ಸಂಸ್ಥೆಯ ಪ್ರಮುಖರುಗಳಾದ ವಾದಿರಾಜ ಭಟ್, ಸುಬ್ರಮಣ್ಯ ಭಟ್ ಹಾಗೂ ಎನ್.ವಿ.ಜಿ.ಕೆ. ಭಟ್ ಇವರುಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಅದಕ್ಕೆ ಅಗತ್ಯವಾದ ಹಣವನ್ನು ದಾನಿಗಳಿಂದ ಸಂಗ್ರಹಿಸಿ ಒದಗಿಸಿರುವುದು ವಿಶೇಷ. ಈಗಾಗಲೇ ಒಸಾಟ್ ಸಂಸ್ಥೆ ರಾಜ್ಯದ ನೂರಕ್ಕೂ ಮಿಕ್ಕಿ ಶಾಲೆಗಳಲ್ಲಿ ಜೀರ್ಣವಾದ ಕಟ್ಟಡಗಳನ್ನು ಪುನರ್ ನಿರ್ಮಾಣ ಗೊಳಿಸಿ ಸಾವಿರಾರು ಮಕ್ಕಳ ಭವಿಷ್ಯಕ್ಕೆ ನೆರವು ನೀಡಿದೆ. ಇಂತಹ ಸಂಸ್ಥೆಯು ಕೊಡಗಿನಲ್ಲಿ ಪ್ರಥಮ ಬಾರಿಗೆ ಮಾಯಮುಡಿ ಶಾಲೆಯನ್ನು ಆರಿಸಿಕೊಂಡಿದ್ದು ಇನ್ನೂ ಕೆಲವು ಶಾಲೆಗಳ ಬಗ್ಗೆ ಅವಲೋಕಿಸುತ್ತಿದೆ.

ಈ ಸಂದರ್ಭ ಒಂದು ಮಹತ್ವದ ಬೆಳವಣಿಗೆಯನ್ನು ಇಲ್ಲಿ ಸ್ಮರಿಸಬೇಕಾಗಿದೆ. ಒಸಾಟ್ ಸಂಸ್ಥೆಗೆ ಯಾವುದೇ ಶಾಲೆಗಳ ಜೀರ್ಣೋದ್ದಾರ ಕೈಗೊಳ್ಳಬೇಕಾಗಿದ್ದರೆ ಆ ಶಾಲಾ ಕಟ್ಟಡ ಇರುವ ನಿವೇಶನದ ಅಧಿಕೃತ ದಾಖಲೆಗಳು ಇರಲೇಬೇಕು. ಇಲ್ಲದಿದ್ದಲ್ಲಿ ದಾನಿಗಳು ನೆರವು ನೀಡುವುದಿಲ್ಲ. ಮಾಯಮುಡಿ ಶಾಲೆಯ ನಿವೇಶನದ ಅಧಿಕೃತ ದಾಖಲೆಗಳು ಲಭ್ಯವಿಲ್ಲದೆ ಜಾಗ ಪರಿವರ್ತನೆಯೂ ಆಗಿರಲಿಲ್ಲ. ಆ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರಾಗಿ ನಸೀಮಾ ಎಂಬವರು ಕಾರ್ಯನಿರ್ವಹಿಸುತ್ತಿದ್ದರು. ಅವರ ಸಹಕಾರದಿಂದ ಅವರ ಪತಿ ಕೆ.ಪಿ. ಅಶ್ರಫ್ ಎಂಬವರು ಈ ನಿವೇಶನದ ದಾಖಲಾತಿಗಳನ್ನು ಸರಿಪಡಿಸುವ ಜವಾಬ್ದಾರಿಕೆ ನಿರ್ವಹಿಸಿದರು. ಒಸಾಟ್‌ನಲ್ಲಿರುವ ಎನ್.ವಿ.ಜಿ.ಕೆ. ಭಟ್ ಅವರು ನನ್ನ ಸಂಬAಧಿಯೂ ಆಗಿದ್ದು ಅವರ ಈ ಕಾರ್ಯದಲ್ಲಿ ನಾನೂ ಕೂಡ ತೊಡಗಿಸಿಕೊಳ್ಳಬೇಕಾಯಿತು. ಅಶ್ರಫ್, ನಸೀಮಾ ಹಾಗೂ ಶಿಕ್ಷಕಿ ರಾಗಿಣಿ ಮೋಹನ್ ಇವರುಗಳು ಬಂದು ನನ್ನನ್ನು ಸಂಪರ್ಕಿಸಿದ ಸಂದರ್ಭ ನಾವೆಲ್ಲ ಸೇರಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿದ್ದೆವು. ಅವರ ಸೂಚನೆ ಮೇರೆಗೆ ವೀರಾಜಪೇಟೆ ತಾಲೂಕಿನ ಸಂಬAಧಿತ ಅಧಿಕಾರಿಗಳು ಕಡತಗಳನ್ನೆಲ್ಲಾ ತೆಗೆದು ಸರಿಪಡಿಸುವ ಕಾರ್ಯದಲ್ಲಿ ತೊಡಗಿದರು. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಅಶ್ರಫ್ ಅವರು ತಮ್ಮ ಕಾರ್ಯಗಳನ್ನೆಲ್ಲ ಬದಿಗೊತ್ತಿ ನಿರಂತರವಾಗಿ ಕಾರ್ಯ ನಿರ್ವಹಿಸಿ ಕಡತಗಳ ವಿಲೇವಾರಿಗೆ ಪ್ರಯತ್ನ ನಡೆಸುತ್ತಿದ್ದುದು ಇಲ್ಲಿ ಗಮನಾರ್ಹ. ಆ ಬಳಿಕ ಸುಮಾರು ೪ ಎಕರೆಯಷ್ಟು ನಿವೇಶನ ಸ್ಪಷ್ಟವಾಗಿ ಶಾಲೆಯ ಹೆಸರಿಗೆ ಬಂದೊದಗಿತು. ಇಂತಹ ಸಂದರ್ಭ ಈ ಎಲೆಮರೆಯ ಕಾಯಿಯಂತೆ ಸೇವೆ ಮಾಡಿದವರನ್ನು ಸ್ಮರಿಸುವುದು ನನ್ನ ಕರ್ತವ್ಯ ಎಂದು ಭಾವಿಸಿ ಈ ಮೂಲಕ ನನ್ನ ಒಂದು ಕಿರು ನೆನಪನ್ನು ಈ ಮೂಲಕ ಜಿಲ್ಲೆಯ ಜನರ ಗಮನಕ್ಕೆ ತರಲು ಬಯಸಿದ್ದೇನೆ.

-ಜಿ. ರಾಜೇಂದ್ರ