ಸೋಮವಾರಪೇಟೆ, ನ. ೧೬: ಅಮ್ಮನ ಮಾತೃವಾತ್ಸಲ್ಯವನ್ನು ಗೋವುಗಳಲ್ಲೂ ಕಾಣುವಂತಾದಾಗ ಮಾತ್ರ ಗೋವಿನ ಪೂಜೆಗೆ ಅರ್ಥ ಬರುತ್ತದೆ ಎಂದು ಲೇಖಕಿ ಜಲಾ ಕಾಳಪ್ಪ ಅಭಿಪ್ರಾಯಿಸಿದರು.
ಇಲ್ಲಿಗೆ ಸಮೀಪದ ಕಿಬ್ಬೆಟ್ಟ ಗ್ರಾಮದ ಬಸವೇಶ್ವರ ದೇವಾಲಯದ ಆವರಣದಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಹಾಗೂ ಬಸವೇಶ್ವರ ದೇವಾಲಯ ಸಮಿತಿ ಇವರುಗಳ ಸಂಯುಕ್ತಾ ಆಶ್ರಯದಲ್ಲಿ ಆಯೋಜಿಸಿದ್ದ ಗೋ ಪೂಜೆ, ಅಹಲ್ಯಾಭಾಯಿ ಸ್ಮರಣೆ ಹಾಗೂ ದೇವಪ್ಪಂಡ ಕುಟ್ಟಪ್ಪ ಸ್ಮರಣೆ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗೋವಿನಲ್ಲಿ ಮುಕ್ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆ ಎಂಬ ಪ್ರತೀತಿ ಇದೆ. ಹೆತ್ತಮ್ಮ ಮೊದಲ ತಾಯಿ ಆದರೆ ಗೋವುಗಳು ಸಾಕುತಾಯಿಯ ಸ್ಥಾನ ಪಡೆಯುತ್ತದೆ. ಗೋವು ನೀಡುವ ಎಲ್ಲವೂ ಆರೋಗ್ಯ, ಕೃಷಿ ಹಾಗೂ ಪರಿಸರ ಪೂರಕವಾಗಿದ್ದು ಗೋವನ್ನು ಕಾಮಧೇನು, ಗೋಮಾತೆ ಎಂಬ ಹೆಸರಿನಲ್ಲಿ ಪೂಜಿಸುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಗೋವನ್ನು ಮಾಂಸಕ್ಕಾಗಿ ಬಳಸುತ್ತಿದ್ದು, ಕಟುಕರ ಹೀನ ಕೃತ್ಯದಿಂದಾಗಿ ಗೋವಿನ ಸಂತತಿ ಕಡಿಮೆಯಾಗುತ್ತಿರುವುದು ದುರಂತ. ಗೋವೊಂದು ಮನೆಯಲ್ಲಿದ್ದರೆ ಆ ಮನೆಯಲ್ಲಿ ಒಬ್ಬ ವೈದ್ಯನಿದ್ದಂತೆ. ಈ ನಿಟ್ಟಿನಲ್ಲಿ ಇಂದಿನ ಯುವ ಜನಾಂಗ ಸೇರಿದಂತೆ ಎಲ್ಲರೂ ಗೋವು ಸಾಕಣೆಯತ್ತ ಹೆಚ್ಚಿನ ಗಮನ ಹರಿಸುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆAದು ಕರೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ಮಾಲಂಬಿ ಪ್ರೇಮನಾಥ್ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂದೂಗಳ ಮೇಲೆ ಷಡ್ಯಂತ್ರ ರೂಪಿಸುವ ನಿಟ್ಟಿನಲ್ಲಿ ಹಿಂಸಾ ಕೃತ್ಯಗಳು ನಡೆಯುತ್ತಿದೆ. ನ್ಯಾಯಕ್ಕಾಗಿ ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾಗ ಹಿಂದೂ ಧರ್ಮ ವಿರೋಧಿಗಳು ಕೇರಳದಿಂದ ಬಾಡಿಗೆ ಗೂಂಡಾಗಳನ್ನು ಕರೆಸಿ ವಿಶ್ವ ಹಿಂದೂ ಪರಿಷತ್ ನ ಪ್ರಧಾನ ಕಾರ್ಯದರ್ಶಿಗಳಾಗಿದ್ದ ದೇವಪ್ಪಂಡ ಕುಟ್ಟಪ್ಪ ಅವರನ್ನು ಕೊಲೆ ಮಾಡಿಸಿರುವುದು ದುರಂತ. ಇಂತಹ ದುಷ್ಕೃತ್ಯಗಳನ್ನು ಕೊನೆಗಾಣಿಸಬೇಕಾದರೆ ಸಮಸ್ತ ಹಿಂದೂಗಳು ಒಂದಾಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಕಿಬ್ಬೆಟ್ಟ ಗ್ರಾಮ ಸಮಿತಿ ಅಧ್ಯಕ್ಷ ಹೆಚ್.ಎಂ. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ದೇವಾಲಯದ ಅರ್ಚಕರಾದ ಶೇಖರಯ್ಯ ಅವರು ಗೋ ಪೂಜೆ ನೆರವೇರಿಸಿ, ಪೂಜೆಯ ಮಹತ್ವವನ್ನು ತಿಳಿಸಿದರು. ವಿ.ಹಿಂ.ಪ.ನ ಪ್ರಮುಖರಾದ ಪರಮೇಶ್ ಕೂತಿ, ನಾಗರಾಜು, ಕಿಬ್ಬೆಟ್ಟ ಶೇಷಪ್ಪ, ನಿರಂತರ ಯೋಗ ಕೇಂದ್ರದ ಕಿಬ್ಬೆಟ್ಟ ಗಣೇಶ್, ಜಿಲ್ಲಾ ಸತ್ಸಂಗದ ಪವಿತ್ರ ಶೇಷಾದ್ರಿ, ದುರ್ಗಾವಾಹಿನಿಯ ಭಾನುಮತಿ ಆದರ್ಶ್ ಕಾರ್ಯಕ್ರಮ ನಿರ್ವಹಿಸಿದರು.