ಗೋಣಿಕೊಪ್ಪಲು, ನ. ೧೭: ದೇಶಕ್ಕೆ ಅಪಾರ ಸೈನಿಕರನ್ನು ನೀಡಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಡಗಿನ ಕುತ್ತುನಾಡು ಹಾಗೂ ಬೇರಳಿನಾಡು ಗ್ರಾಮಕ್ಕೆ ಸೇರಿರುವ ಕೆ.ಬಿ. ಪ್ರೌಢಶಾಲೆ ವಿದ್ಯಾಸಂಸ್ಥೆಗೆ ಇದೀಗ ವಜ್ರ ಮಹೋತ್ಸವದ ಸಂಭ್ರಮ. ಎರಡು ಗ್ರಾಮದ ಅಪಾರ ವಿದ್ಯಾರ್ಥಿಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿರುವ ಹೆಗ್ಗಳಿಕೆ ಈ ಪ್ರೌಢಶಾಲೆಯ ವಿಶೇಷವಾಗಿದೆ. ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಕೆ.ಬಿ. ಪ್ರೌಢಶಾಲೆಯ ಅಭಿವೃದ್ಧಿಗಾಗಿ ಈಗಾಗಲೇ ಎಲ್‌ಡಿಸಿ ಲೂಯಿಸ್ ಖಾಸಗಿ ಕಂಪೆನಿಯು ರೂ. ೪೦ ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದು, ಶಾಲೆಯ ಕಟ್ಟಡದ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ. ಡಿಸೆಂಬರ್ ೧ ರಂದು ವಜ್ರ ಮಹೋತ್ಸವ ನಡೆಯಲಿದೆ.

ವಜ್ರ ಮಹೋತ್ಸವದ ಅಂಗವಾಗಿ ಕೂರ್ಗ್ ಹಾಕಿ ಸಹಯೋಗದಲ್ಲಿ ಹಾಕಿ ಪಂದ್ಯಾಟ ನಡೆಯಲಿದೆ. ಜಿಲ್ಲಾಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಪ್ರತಿ ತಂಡದಲ್ಲಿ ೫ ಅತಿಥಿ ಆಟಗಾರರನ್ನು ಒಳಗೊಂಡ ತಂಡವು ಪ್ರದರ್ಶನ ನೀಡಲಿದೆ. ವಿಜೇತ ತಂಡಕ್ಕೆ ನಗದು ಬಹುಮಾನ ಸೇರಿದಂತೆ ಪಾರಿತೋಷಕ ನೀಡಲಾಗುವುದು. ಹಾಕಿ ಕ್ರೀಡೆಯೊಂದಿಗೆ ಹಗ್ಗಜಗ್ಗಾಟ ಪಂದ್ಯಾವಳಿ ಸೇರಿದಂತೆ ಇನ್ನಿತರ ಪೈಪೋಟಿ ಜರುಗಲಿವೆ.

೧೯೬೩ನೇ ಜೂನ್ ೧೧ ರಂದು ಕೆ.ಬಿ. ಪ್ರೌಢಶಾಲೆ ಪ್ರಾರಂಭವಾಗಿದ್ದು, ಆರಂಭದಲ್ಲಿ ಸ್ಥಳದ ಅಭಾವವಿದ್ದ ಕಾರಣ ಕಂಡAಗಾಲದ ಹೈಯರ್ ಪ್ರೆöÊಮರಿ ಶಾಲೆಯಲ್ಲಿ ತನ್ನ ಕಾರ್ಯಾರಂಭ ನಡೆಸಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಉದ್ದೇಶ ಹೊಂದಿದ್ದ ಗ್ರಾಮದ ಹಿರಿಯರಾದ ಬಲ್ಲಣಮಾಡ ಕೆ. ಪೊನ್ನಪ್ಪ, ತೀತಮಾಡ ಕೆ. ಮೇದಪ್ಪ ಅವರುಗಳ ಪ್ರಯತ್ನದ ಫಲವಾಗಿ ಈ ವಿದ್ಯಾಸಂಸ್ಥೆ ಅಸ್ತಿತ್ವಕ್ಕೆ ಬಂತು. ಶಾಲೆಯ ಅಭಿವೃದ್ಧಿಗಾಗಿ ನಾಡಿನ ಹಿರಿಯರು, ದಾನಿಗಳ ನೆರವಿನಿಂದಾಗಿ ೧೦ ಎಕರೆ ವಿಸ್ತೀರ್ಣದ ಜಾಗವನ್ನು ಪಡೆದಿದ್ದರು. ಗ್ರಾಮೀಣ ಭಾಗವಾದ ಕುತ್ತುನಾಡು ಹಾಗೂ ಬೇರಳಿನಾಡಿನ ಮಕ್ಕಳಿಗೆ ಸಾರಿಗೆ ಸೌಕರ್ಯ ಇಲ್ಲದ ಅಂದಿನ ಕಾಲದಲ್ಲಿ ಈ ವಿದ್ಯಾಸಂಸ್ಥೆಯು ವಿದ್ಯಾರ್ಜನೆ ನೀಡಿದೆ.

ಸುಂದರ ಪರಿಸರದ ನಡುವೆ ವಿಶಾಲವಾದ ಮೈದಾನದೊಂದಿಗೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸ್ವಂತ ಕಟ್ಟಡ ನಿರ್ಮಾಣದೊಂದಿಗೆ ಪ್ರಸ್ತುತ ಕುಟ್ಟಂದಿಯಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ೬೧ ವಸಂತಗಳನ್ನು ಕಳೆದಿದೆ.

ಇದೀಗ ಸಂಸ್ಥೆಯ ಆಡಳಿತ ಮಂಡಳಿಯು ಹೊಸ ಹುರುಪಿನೊಂದಿಗೆ ಕಟ್ಟಡಗಳ ನವೀಕರಣದೊಂದಿಗೆ ತನ್ನ ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳಲು ಅಣಿಯಾಗುತ್ತಿದೆ.

ಅರವತ್ತಕ್ಕೂ ಹೆಚ್ಚು ವರ್ಷದ ಇತಿಹಾಸವನ್ನು ಹೊಂದಿರುವ ಈ ಶಾಲೆಯಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಸಮಾಜದ ವಿವಿಧ ಹುದ್ದೆಗಳನ್ನು ಅಲಂಕರಿಸಿ, ದೇಶದ ಏಳಿಗೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ನುರಿತ ಶಿಕ್ಷಕ ವರ್ಗ ಮಕ್ಕಳ ಏಳಿಗೆಗೆ ಕಾಯಾ, ವಾಚಾ, ಮನಸಾ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಇವರ ಸತತ ಪ್ರಯತ್ನದ ಫಲವಾಗಿ ೨೦೧೪-೧೫ನೇ ಸಾಲಿನಲ್ಲಿ ಶೇ. ೧೦೦ ಫಲಿತಾಂಶ ಹಾಗೂ ಕಳೆದ ೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿಯೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶವನ್ನು ಪಡೆಯುವ ಮೂಲಕ ಸಾಧನೆಯೊಂದಿಗೆ ಗಣನೀಯ ಪ್ರಗತಿ ಸಾಧಿಸಿದೆ.

ಶಾಲಾ ಕಟ್ಟಡಗಳನ್ನು ನವೀಕರಿಸ ಬೇಕೆನ್ನುವ ಮಹದಾಸೆಯಿಂದ ವಿವಿಧ ದಾನಿಗಳ ಹಾಗೂ ಸಂಘ-ಸAಸ್ಥೆಗಳ ನೆರವು ಪಡೆದಿರುವ ಆಡಳಿತ ಮಂಡಳಿ ಶಾಲೆಯ ಮೇಲ್ಛಾವಣಿ, ದುರಸ್ತಿ, ಶಾಲೆಯ ವಿದ್ಯಾರ್ಥಿಗಳಿಗೆ, ಶಾಲಾ ಸಿಬ್ಬಂದಿಗಳಿಗೆ ಆಧುನಿಕ ಮಾದರಿಯ ಶೌಚಾಲಯ ನಿರ್ಮಾಣ, ಶಾಲೆಯ ಪ್ರತಿ ಕೊಠಡಿಗಳಿಗೆ ಆಧುನಿಕ ನೆಲಹಾಸು (ಟೈಲ್ಸ್), ಶಾಲಾ ಆವರಣದಲ್ಲಿ ಉತ್ತಮ ಕೈತೋಟ ನಿರ್ಮಾಣ, ಆಡಳಿತ ಮಂಡಳಿ ವತಿಯಿಂದ ಸ್ವಂತ ಖರ್ಚಿನಲ್ಲಿ ಹಾಸ್ಟೆಲ್ ಕಟ್ಟಡ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ.

ವಿದ್ಯಾಸಂಸ್ಥೆ ಅರವತ್ತು ವಸಂತ ಗಳನ್ನು ಪೂರೈಸಿದ ಸವಿನೆನಪಿಗಾಗಿ ವಜ್ರ ಮಹೋತ್ಸವ ಆಚರಣೆ ನಡೆಯುತ್ತಿದ್ದು, ಇದರ ಅಂಗವಾಗಿ ನವೆಂಬರ್ ೨೫ ರಿಂದ ಡಿಸೆಂಬರ್ ೧ ರವರೆಗೆ ಹಾಕಿ ಪಂದ್ಯಾಟ, ಸಾರ್ವಜನಿಕರಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಪೈಪೋಟಿ, ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನೂ ಹಮ್ಮಿಕೊಳ್ಳಲಾಗಿದೆ.

- ಹೆಚ್.ಕೆ. ಜಗದೀಶ್