ಸೋಮವಾರಪೇಟೆ, ನ. ೧೭: ರಾಜ್ಯದಲ್ಲಿ ಸರಕಾರಿ ಶಾಲೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದರೂ ಸಹ ಶಿಕ್ಷಕರ ಕೊರತೆ ಕಾಡುತ್ತಿದೆ. ಸರಕಾರವು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿದರೆ ಮಕ್ಕಳಿಗೆ ಇನ್ನಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯವೆಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಕೊಡಗು ಜಿಲ್ಲೆಯ ೯೮ ಶಾಲೆಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು ೫೦೭ ಶಾಲೆಗಳಿಗೆ ರೂ. ೨.೭೪ ಕೋಟಿ ವೆಚ್ಚದ ೪,೦೪೪ ಜೊತೆ ಡೆಸ್ಕ್ ಮತ್ತು ಬೆಂಚು ವಿತರಣಾ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಾಗಾಗಿ ಸರಕಾರಿ ಶಾಲೆಗಳು ಉಳಿಯಲು ದಾಖಲಾತಿ ಹೆಚ್ಚಿಸುವಂತೆ ಪೋಷಕರು ಗಮನ ಹರಿಸಬೇಕೆಂದರು.

ಈ ಸಂದರ್ಭ ಉಪಸ್ಥಿತರಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್.ಅನಿಲ್ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯ ೯೮ ಶಾಲೆಗಳಿಗೆ ೭೨ ಲಕ್ಷ ವೆಚ್ಚದಲ್ಲಿ ೮೫೦ ಜೊತೆ ಡೆಸ್ಕ್ ಮತ್ತು ಬೆಂಚುಗಳನ್ನು ನೀಡಲಾಗಿದೆ. ರಾಜ್ಯದ ೧೧,೦೦೦ ಶಾಲೆಗಳಿಗೆ ಈವರೆಗೆ ಶ್ರೀ ಕ್ಷೇತ್ರದಿಂದ ರೂ.೨೬ ಕೋಟಿ ವೆಚ್ಚದ ೭೨,೦೦೦ ಜೊತೆ ಡೆಸ್ಕ್ ಮತ್ತು ಬೆಂಚು ವಿತರಿಸಲಾಗಿದೆ. ಪಸಕ್ತ ವರ್ಷ ೧,೦೩೦ ಅತಿಥಿ ಶಿಕ್ಷಕರನ್ನು ಸರಕಾರಿ ಶಾಲೆಗಳಲ್ಲಿ ನೇಮಿಸಲಾಗಿದೆ. ೬೫ ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಓ ಕೆ. ಆನಂದ, ತಾ.ಪಂ. ಇ.ಓ.ಭವಾನಿ ಶಂಕರ್, ಪ್ರಬಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ನಿರ್ದೇಶಕ ಶಿವಾನಂದ ಆಚಾರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.