ಗೋಣಿಕೊಪ್ಪಲು, ನ. ೧೭: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೧೦೦ ವರ್ಷ ತುಂಬಿದ ಸವಿನೆನಪಿನಲ್ಲಿ ನಡೆದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ೨ ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಶತಮಾನೋತ್ಸವ ಆಚರಿಸಲಾಯಿತು. ಹಳೆಯ ವಿದ್ಯಾರ್ಥಿಗಳು, ಶಿಕ್ಷಕ ವರ್ಗ, ಶಾಲಾ ಆಡಳಿತ ಮಂಡಳಿ ಸೇರಿದಂತೆ ಸಾರ್ವಜನಿಕರು ಭಾಗಿಯಾಗಿ ಹಬ್ಬದ ಕಳೆ ನೀಡಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಈ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಬದುಕು ರೂಪಿಸಿಕೊಂಡು ಸತ್ಪçಜೆಗಳಾಗಿ ಹೊರಹೊಮ್ಮಿದ್ದಾರೆ. ಮೂಲಭೂತ ಸೌಕರ್ಯಗಳೊಂದಿಗೆ ಊರಿಗೊಂದು ಶಾಲೆ ಅಗತ್ಯ ಇದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಮಾಯಮುಡಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಲಿದೆ, ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ಶಾಸಕ ಪೊನ್ನಣ್ಣ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮಾಯಮುಡಿಯ ಶಾಲಾ ಆವರಣದಲ್ಲಿ ಪದವಿ ಪೂರ್ವ ಕಾಲೇಜು ಆರಂಭವಾಗಬೇಕು. ವಿದ್ಯಾರ್ಥಿಗಳ ಸಂಖ್ಯೆ ಅಧಿಕಗೊಂಡಲ್ಲಿ ಇದಕ್ಕೆ ಅವಕಾಶವಾಗಲಿದೆ ಎಂದರು.
ಶಾಲಾಭಿವೃದ್ಧಿಗೆ ದೇಣಿಗೆ
ಶಾಲೆಯ ಶತಮಾನೋತ್ಸವದ ಅಂಗವಾಗಿ ದಾನಿಗಳಾದ ಮಲ್ಲಂಗಡ ದಯಾ ಪ್ರಹ್ಲಾದ್, ಕಾಳಪಂಡ ಟಿಪ್ಪು ಬಿದ್ದಪ್ಪ, ಎಸ್.ಎಸ್. ಸುರೇಶ್, ಚೆಪ್ಪುಡಿರ ರಾಧಾ ಅಚ್ಚಯ್ಯ ಅವರುಗಳು ತಲಾ ರೂ. ಒಂದು ಲಕ್ಷ ಹಣವನ್ನು ಶಾಲಾ ಅಭಿವೃದ್ಧಿಗೆ ದೇಣಿಗೆಯಾಗಿ ನೀಡಿದರು.
ಗಮನ ಸೆಳೆದ ನೃತ್ಯ
ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮಂದತವ್ವ ಗೆಜ್ಜೆ ತಂಡದಿAದ ನಡೆದ ನೃತ್ಯರೂಪಕ, ಗೋಣಿಕೊಪ್ಪ ಸಂತ ಥೋಮಸ್ ಶಾಲೆಯ ವಿದ್ಯಾರ್ಥಿಗಳು ಪೂಜಾ ನೃತ್ಯ ಪ್ರಸ್ತುತಪಡಿಸಿದರು. ದಕ್ಷಿಣ ಕನ್ನಡ ಭಾಗದ ಕಲಾವಿದರಿಂದ ‘ಶಿವಧೂತ ಗುಳಿಗ' ನಾಟಕ ಪ್ರದರ್ಶನ ರೋಮಾಂಚನ ನೀಡಿತು. ಮಾಯಮುಡಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ಶತಮಾನೋತ್ಸವ ಸಂಭ್ರಮದ ಅಂಗವಾಗಿ ಸಲಹಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಶಿಕ್ಷಕರು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಯಮುಡಿ ಗ್ರಾ.ಪಂ.ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ವಹಿಸಿದ್ದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಟಿಪ್ಪು ಬಿದ್ದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾನಂಡ ಪೃಥ್ಯು, ಶಾಲಾ ಮುಖ್ಯಶಿಕ್ಷಕಿ ಜಯಮ್ಮ, ಗ್ರಾ.ಪಂ. ಉಪಾಧ್ಯಕ್ಷೆ ಶಾಂತ, ಸದಸ್ಯರಾದ ಸುಶೀಲಾ, ಪೊನ್ನಿಮಾಡ ಸರಸ್ವತಿ, ಸ್ಮರಣ ಸಂಚಿಕೆ ಸಂಪಾದಕ ಸಣ್ಣುವಂಡ ವಿಶ್ವನಾಥ್, ಸಲಹಾ ಸಮಿತಿಯ ಸದಸ್ಯರಾದ ಸಿ.ಕೆ.ಚಿಣ್ಣಪ್ಪ, ಪುಚ್ಚಿಮಾಡ ರಾಯ್ ಮಾದಪ್ಪ, ಖಜಾಂಚಿ ಎ.ಎಸ್.ಸುರೇಶ್, ಎಸ್‌ಡಿಎಂಸಿ ಅಧ್ಯಕ್ಷ ಎನ್.ಸಿ.ಉಮೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಹೆಚ್. ಸಿ. ಜಯಮ್ಮ ಸ್ವಾಗತಿಸಿ, ಶಿಕ್ಷಕಿ ಸುಮಾ, ಲಾವಣ್ಯ, ಪುಷ್ಪಾ ನಿರೂಪಿಸಿ, ರಾಗಿಣಿ ವಂದಿಸಿದರು.
-ಹೆಚ್.ಕೆ. ಜಗದೀಶ್