ಶನಿವಾರಸಂತೆ, ನ. ೧೫ : ಜಿಲ್ಲೆಯ ಗಡಿಗ್ರಾಮ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ನಂದಿಪುರ ಕೆರೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ರೂ.೩.೯೦ ಕೋಟಿ ವೆಚ್ಚದಲ್ಲಿ “ಎ” ಶ್ರೇಣಿಯ ಕೆರೆಯಾಗಿ ಅಭಿವೃದ್ಧಿಪಡಿಸಲಾಗಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೆ ಸಜ್ಜಾಗಿದೆ.

ಜಿಲ್ಲೆಯಲ್ಲೇ ಪ್ರಥಮ “ಎ” ಶ್ರೇಣಿ ಕೆರೆಯಾಗಿದ್ದು ಸುಂದರ ಉದ್ಯಾನದೊಂದಿಗೆ ಕಂಗೊಳಿಸುತ್ತಿದೆ. ಸುತ್ತಮುತ್ತಲಿನ ಕೃಷಿಕರ ನೂರಾರು ಎಕರೆ ಕೃಷಿ ಜಮೀನಿಗೆ ನೀರುಣಿಸುವ ಕೆರೆ ೪.೫೦ ಎಕರೆ ವಿಸ್ತೀರ್ಣ ಹೊಂದಿದೆ.ಹಲವಾರು ವರ್ಷಗಳಿಂದ ಹೂಳು ತುಂಬಿ ಹಾಳು ಬಿದ್ದು ನಿರುಪಯುಕ್ತವಾಗಿದ್ದ ಕೆರೆಯನ್ನು ಪ್ರಸ್ತುತ ಅಭಿವೃದ್ಧಿಪಡಿಸಲಾಗಿದ್ದು ಉದ್ಘಾಟನೆಗೆ ಸಿದ್ಧವಾಗಿದೆ.

ಕಾಂಗ್ರೆಸ್ ಮುಖಂಡ ಹಾಗೂ ಹೈಕೋರ್ಟ್ ಹಿರಿಯ ವಕೀಲ ಕೊಡ್ಲಿಪೇಟೆಯ ಎಚ್.ಎಸ್.ಚಂದ್ರಮೌಳಿ ತಮ್ಮ ಗ್ರಾಮದ ನಂದಿಕೆರೆಯ ಅಭಿವೃದ್ಧಿಯ ರೂವಾರಿಯಾಗಿದ್ದಾರೆ. ತವರೂರಿನ ಕೆರೆಗೆ ಹೊಸ ರೂಪ ಕೊಡಲು ಕೆರೆ ಸುತ್ತ ವಾಯುವಿಹಾರಕ್ಕೆ ರಸ್ತೆ, ವಿಶ್ರಾಂತಿ ಧಾಮ, ಮಕ್ಕಳ ಉದ್ಯಾನ, ಬಣ್ಣಬಣ್ಣದ ವಿದ್ಯುತ್ ದೀಪ ಅಳವಡಿಕೆ, ಸುತ್ತಲು ತಡೆ ಬೇಲಿ ನಿರ್ಮಿಸಿ ಸುವ್ಯವಸ್ಥಿತ ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯ ಮನವಿಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಸಲ್ಲಿಸಿದ್ದರು. ಅಂದಿನ ನೀರಾವರಿ ಸಚಿವರಾಗಿದ್ದ ಮಾಧುಸ್ವಾಮಿ ಸಕರಾತ್ಮಕವಾಗಿ ಸ್ಪಂದಿಸಿದ್ದರು. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಸಣ್ಣ ನೀರಾವರಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್, ಶಾಸಕ ಡಾ.ಮಂತರ್ ಗೌಡ ಅವರು ಯೋಜನೆಯ ಮನವಿಗೆ ಸ್ಪಂದಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹಸಿರು ನಿಶಾನೆ ತೋರಿದರು.

ನಂದಿಪುರ ಕೆರೆ ಗೌರಿ-ಗಣೇಶ ವಿಸರ್ಜನೋತ್ಸವದ ಕೆರೆಯಾಗಿದ್ದು ವಿಸರ್ಜನೆಗೆ ಮತ್ತು ಬಾಗಿನ ಅರ್ಪಣೆ, ಇತ್ಯಾದಿ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಮಾಡಲು ಪ್ರತ್ಯೇಕವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ಚಂದ್ರಮೌಳಿಯವರ ೧೦ ವರ್ಷಗಳ ಕನಸು ನನಸಾಗಿ ನಂದಿಕೆರೆ ಅಭಿವೃದ್ಧಿ ಕಾರ್ಯ ಮುಕ್ತಾಯ ಹಂತ ತಲುಪು ತ್ತಿದ್ದು ಲೋಕಾರ್ಪಣೆಗೆ ಸಜ್ಜಾಗುತ್ತಿದೆ. -ಶ.ಗ. ನಯನತಾರಾ