ಸೋಮವಾರಪೇಟೆ, ನ. ೧೭: ಕ್ಲಾಸ್ ಆಫ್ ೯೯ ಗ್ರೂಪ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಆಶ್ರಯದಲ್ಲಿ ತಾ. ೧೮ ರಂದು (ಇಂದು) ಮಹಿಳಾ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಗ್ರೂಪ್‌ನ ಸಂಚಾಲಕಿ ಕುಮುದಾ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ ೯.೩೦ಕ್ಕೆ ಶಿಬಿರ ಪ್ರಾರಂಭವಾಗಲಿದ್ದು, ಮಧ್ಯಾಹ್ನ ೨.೩೦ರ ತನಕ ನಡೆಯಲಿದೆ. ಸಾರ್ವಜನಿಕರು ಅವಕಾಶವನ್ನು ಸದುಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಡಾ. ದುರ್ಗಾಪ್ರಸಾದ್ ಅವರು ಹೃದಯ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಅವಶ್ಯಕತೆಯಿದ್ದವರಿಗೆ ಇಸಿಜಿ, ಎಖೋ ತಪಾಸಣೆ ನಡೆಯಲಿದೆ. ಸಾಮಾನ್ಯ ವೈದ್ಯಕೀಯ ತಪಾಸಣೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಡಾ. ಧನಂಜಯ ಮೇದಪ್ಪ ಮತ್ತು ಡಾ. ಎನ್. ಅಮೂಲ್ಯ ನಡೆಸಲಿದ್ದಾರೆ. ದಂತ ವೈದ್ಯ ರಾಕೇಶ್ ಪಟೇಲ್, ನೇತ್ರತಜ್ಞ ಕಿರಣ್ ಭಟ್, ಮೂಳೆತಜ್ಞ ಜೀವನ್ ರವಿ ಭಾಗವಹಿಸಲಿದ್ದಾರೆ ಎಂದರು. ಪಶುವೈದ್ಯರಾದ ವಿಭಾ ರಘುರಾಮ್ ಅವರು ಸಾಕುಪ್ರಾಣಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ನಾಯಿ ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ನಿಯಂತ್ರಣ ಲಸಿಕೆ ನೀಡಲಾಗುತ್ತದೆ. ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ಅವರು ರಕ್ತದಾನಿಗಳಿಗೆ ಸಲಹೆ ನೀಡಲಿದ್ದಾರೆ ಎಂದು ಮಾಹಿತಿಯಿತ್ತರು. ಇನ್ನರ್‌ವ್ಹೀಲ್ ಅಧ್ಯಕ್ಷೆ ಸಂಗೀತ ದಿನೇಶ್ ಮಾತನಾಡಿ, ಪ್ರಪಂಚದಲ್ಲೇ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇನ್ನರ್‌ವ್ಹೀಲ್ ಸಂಸ್ಥೆ, ಸೋಮವಾರಪೇಟೆಯಲ್ಲೂ ಅನೇಕ ಸಮಾಜಸೇವೆ ಕೆಲಸಗಳನ್ನು ಮಾಡುತ್ತಿದೆ. ಕೊಡಗಿನ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ಹೆಚ್ಚಿನ ರಕ್ತದ ಅವಶ್ಯಕತೆ ಇದ್ದು, ಸಾರ್ವಜನಿಕರು, ಗ್ರಾಮೀಣ ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರೂಪ ಮಹೇಶ್, ಸಂದೀಪ್, ಕ್ಲಬ್‌ನ ಸರಿತಾ ರಾಜೀವ್ ಇದ್ದರು.