ನಾಪೋಕ್ಲು, ನ. ೧೭: ಹೊದ್ದೂರು ಗ್ರಾಮದ ಜಾಗ ನಿವೇಶನಕ್ಕೆ ಯೋಗ್ಯವಾಗಿ ಕಂಡುಬರುತ್ತಿಲ್ಲ. ಭೂ ವಿಜ್ಞಾನ ಇಲಾಖೆಯವರು ಸ್ಥಳ ಪರೀಶೀಲನೆ ಮಾಡಿ ನಿವೇಶನಕ್ಕೆ ಯೋಗ್ಯವೇ ಎಂದು ದೃಢೀಕರಣ ನೀಡಬೇಕಿದೆ. ಆ ಬಳಿಕವಷ್ಟೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಹೇಳಿದರು.

ಹೊದ್ದೂರು ಗ್ರಾಮದ ಪೆಗ್ಗೋಳಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಭೇಟಿಯಾಗಿ ಮಾತನಾಡಿದರು.

ಇದೀಗ ನಿವೇಶನಕ್ಕಾಗಿ ಹೋರಾಟ ಮಾಡುತ್ತಿರುವ ಜಾಗ ಖಾಸಗಿಯವರಿಗೆ ಸೇರಿದ್ದು, ಸಮೀಪದಲ್ಲಿರುವ ಜಾಗ ಮಂಜೂರು ಮಾಡಬೇಕಿದ್ದರೆ ಅದು ವಾಸಕ್ಕೆ ಯೋಗ್ಯವೇ ಎಂದು ಪರಿಶೀಲಿಸಬೇಕು. ಕುಡಿಯುವ ನೀರಿನ ಲಭ್ಯತೆ, ರಸ್ತೆ ಸೌಲಭ್ಯ ಮತ್ತಿತರ ಮೂಲಭೂತ ಸೌಲಭ್ಯಗಳ ಬಗ್ಗೆ ಪರೀಶಿಲನೆ ನಡೆಸಬೇಕಿದೆ. ಆ ಬಳಿಕ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದರು.

ಹೊದ್ದೂರು ಮಾತ್ರವಲ್ಲ.ಎಂ ಬಾಡಗದಲ್ಲೂ ನಿವೇಶನ ರಹಿತರ ಸಮಸ್ಯೆಗಳಿವೆ. ಅಲ್ಲಿಯೂ ಸಂಬAಧಿಸಿದವರ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಯಾವುದೇ ಸಂದರ್ಭದಲ್ಲಿ ಖಾಸಗಿ ಸ್ಥಳವನ್ನು ಒತ್ತುವರಿ ಮಾಡಿ ನಿವೇಶನಕ್ಕೆ ವಶಪಡಿಸಿಕೊಳ್ಳುವಂತಿಲ್ಲ. ಅದಕ್ಕೆ ಕಾನೂನಾತ್ಮಕ ಕ್ರಮಗಳಿವೆ ಎಂದರು.

ನಿವೇಶನಾ ರಹಿತರ ಸಮಸ್ಯೆ ಬಗೆಹರಿಸಿ ಶೀಘ್ರ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮೊಣ್ಣಪ್ಪ ಒತ್ತಾಯಿಸಿದರು.

ಈ ಸಂದರ್ಭ ಕಂದಾಯ ಪರಿವೀಕ್ಷಕ ಪ್ರಸಾದ್ ಹಾಗೂ ಗ್ರಾಮ ಲೆಕ್ಕಿಗ ಸಂತೋಷ್ ಪಾಟೀಲ, ಗ್ರಾಮ ಅಭಿವೃದ್ಧಿ ಅಧಿಕಾರಿ ಅಬ್ದುಲ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕುಸುಮಾವತಿ, ಪ್ರಮುಖರಾದ ಭೋಜ, ಸತೀಶ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಕಿರಣ್, ಜಗದೀಶ್, ಮಹಮ್ಮದ್, ಮಾದೇಶ, ಲೋಕೇಶ್, ಸುಜಾತ, ಮೋಹನ್, ಆನಂದ, ಸೌಮ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.