ಅನಿಲ್ ಎಚ್.ಟಿ.
ಮಡಿಕೇರಿ, ನ. ೧೮: ಹವಾಮಾನ ವೈಪರೀತ್ಯದಿಂದಾಗಿ ಸುರಿಯುತ್ತಿರುವ ಅಕಾಲಿಕ ಮಳೆ, ತೋಟಗಳಲ್ಲಿ ಕಾರ್ಮಿಕರ ತೀವ್ರ ಕೊರತೆ, ಗುಣಮಟ್ಟದ ಕಾಫಿ ಉತ್ಪಾದನೆಯಲ್ಲಿ ಉಂಟಾಗುತ್ತಿರುವ ತೊಡಕುಗಳೇ ಕಾಫಿ ಕೃಷಿಯ ಪ್ರಸ್ತುತ ದಿನಗಳ ಪ್ರಮುಖ ಸವಾಲುಗಳಾಗಿದ್ದು, ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾಫಿ ಬೆಳೆಗಾರರೊಂದಿಗೆ ಸರಕಾರಗಳೂ ಸಹಕರಿಸುವ ಅನಿವಾರ್ಯತೆ ಎದುರಾಗಿದೆ ಎಂದು ದಕ್ಷಿಣ ಭಾರತ ಬೆಳೆಗಾರರ ಒಕ್ಕೂಟದ(ಉಪಾಸಿ) ಅಧ್ಯಕ್ಷ ಸಿ. ಮ್ಯಾಥ್ಯು ಅಬ್ರಾಹಂ ಹೇಳಿದ್ದಾರೆ.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ನ ೬೬ ನೇ ವಾರ್ಷಿಕ ಸಮ್ಮೇಳನ ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ವಿಲೇಜ್ ನಲ್ಲಿ ಪ್ರಾರಂಭವಾಗಿದ್ದು ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಾಫಿ ರಂಗದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಮಿಕರನ್ನೇ ನಂಬಿರುವ ಕಾಫಿ ಉದ್ಯಮವು ಇಂದು ಕವಲುದಾರಿಯಲ್ಲಿದೆ, ಕಾಫಿ ಬೆಳೆಗೆ ಇನ್ನು ೩ ವರ್ಷಗಳ ಕಾಲ ಅತ್ಯುತ್ತಮ ಬೆಲೆ ನಿರೀಕ್ಷಿಸಬಹುದಾಗಿದ್ದರೂ ಕಾಫಿ ತೋಟಗಳಲ್ಲಿ ಅಕಾಲಿಕ ಮಳೆ, ಗಾಳಿಯಂಥ ಹವಾಮಾನ ವೈಪರಿತ್ಯದಿಂದಾಗಿ ಕಾಫಿಯ ಉತ್ಪಾದನೆ ನಿರೀಕ್ಷೆಗೂ ಮೀರಿ ಕಡಮೆಯಾಗುತ್ತಿದೆ, ಅಂತೆಯೇ ಅಕಾಲಿಕ ಮಳೆ ಹಾಗೂ ಕಾರ್ಮಿಕರು ಸರಿಯಾದ ಸಮಯಕ್ಕೆ ದೊರಕದ ಹಿನ್ನಲೆಯಲ್ಲಿಯೂ ಕಾಫಿ ಬೆಳೆಯ ಗುಣಮಟ್ಟ ಕೂಡ ಕುಂಠಿತವಾಗಿದೆ, ಈ ಸವಾಲುಗಳನ್ನು ಎದುರಿಸುವುದೇ ಇಂದಿನ ತುರ್ತು ಅಗತ್ಯವಾಗಿದೆ ಎಂದೂ ಮ್ಯಾಥ್ಯು ಅಬ್ರಾಹಂ ಹೇಳಿದರು,
ಬ್ರೆಜಿಲ್, ಕೊಲಂಬಿಯಾ, ಮೆಕ್ಸಿಕೋದಂಥ ಜಗತ್ತಿನ ಪ್ರಮುಖ ಕಾಫಿ ಬೆಳೆಗಾರ ದೇಶಗಳಲ್ಲಿಯೂ ಈಗ ಕಾಫಿ ಉತ್ಪಾದನೆ ಗಣನೀಯವಾಗಿ ಕುಂಠಿತವಾಗಿದೆ, ಹೀಗಾಗಿ ಭಾರತದ ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮುಂದಿನ ೩ ವರ್ಷಗಳ ಕಾಲ ಉತ್ತಮ ಬೇಡಿಕೆ ಲಭಿಸುವ ಎಲ್ಲಾ ಸಾಧ್ಯತೆಗಳಿದೆ, ಹೀಗಿದ್ದಾಗ ಹೆಚ್ಚಿನ ಅಥವಾ ಕಡಮೆ ಮಳೆ, ಜತೆಗೆ ಅಕಾಲಿಕವಾಗಿ ಸುರಿಯುತ್ತಾ ಫಸಲಿನ ಮೇಲೆ ಪರಿಣಾಮ ಬೀರುತ್ತಿರುವ ಮಳೆಯಿಂದಾಗಿ ಭಾರತದಲ್ಲಿಯೂ ಕಾಫಿ ಉತ್ಪಾದನೆ ಇಳಿಮುಖವಾಗಲಿದೆ, ಇದು ಬೆಳೆಗಾರರ ಪಾಲಿಗೆ ಕಳವಳಕಾರಿಯಾದ ವಿಚಾರ ಎಂದು ಅಬ್ರಾಹಂ ವಿಷಾಧಿಸಿದರು,
ಕರ್ನಾಟಕದಲ್ಲಿ ಈ ಕೃಷಿ ಸಾಲಿನಲ್ಲಿ ಅರೇಬಿಕಾ ಕಾಫಿಯ ಉತ್ಪಾದನೆಯಲ್ಲಿ ಶೇ.೫೦ ರಷ್ಟು ಕುಂಠಿತವಾಗಲಿದ್ದು, ಕಾಫಿ ಕೃಷಿಕರ ನೆರವಿಗೆ ಸರ್ಕಾರಗಳು ಇನ್ನಾದರೂ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದೂ ಅವರು ಆಗ್ರಹಿಸಿದರು.
ಉಪಾಸಿಯ ಕಾಫಿ ಸಮಿತಿಯ ಅಧ್ಯಕ್ಷ ಸಹದೇವ ಬಾಲಕೃಷ್ಣ ಮಾಹಿತಿ ನೀಡಿ, ಕಾಫಿಗೆ ಕಳೆದ ೪-೫ ವರ್ಷಗಳಿಂದ ಸುಸ್ಥಿರವಾದ ಬೆಲೆ ಲಭಿಸುತ್ತಿದೆ, ಆದರೆ, ಕಾಫಿ ಕಣ, ಯಂತ್ರೋಪಕರಣಗಳು, ಕಾಫಿ ಉದ್ಯಮಗಳಿಗೆ ಅಗತ್ಯ ಪರಿಕರಗಳನ್ನು ಖರೀದಿಸಲು ಅಗತ್ಯವಾದ ಅಧಿಕ
(ಮೊದಲ ಪುಟದಿಂದ) ಆರ್ಥಿಕ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ, ೧೫ ವರ್ಷಗಳಿಂದಲೂ ಕಾಫಿ ಬೆಳೆಗಾರರು, ಉದ್ಯಮಿಗಳು ಕಷ್ಟದ ದಿನಗಳನ್ನೇ ಎದುರಿಸುತ್ತಾ ಬಂದಿದ್ದಾರೆ ಎಂದು ವಿಷಾದಿಸಿದರು.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (ಕೆಪಿಎ) ಅಧ್ಯಕ್ಷ ಕಳ್ಳಿಚಂಡ ರಾಜೀವ್ ಗಣಪತಿ ಮಾತನಾಡಿ, ಕಾಫಿ ಉದ್ಯಮದ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ರೀತಿಯಲ್ಲಿ ಸಂಶೋಧನೆ ನಡೆಯಬೇಕಾಗಿದೆ, ಅಂತೆಯೇ ಅಗತ್ಯವಾದ ಅಭಿವೃದ್ಧಿ ಕಾರ್ಯಯೋಜನೆಗಳೂ ಜಾರಿಯಾಗಬೇಕಾಗಿದೆ, ಹವಾಮಾನ ವೈಪರಿತ್ಯ, ಕೀಟಗಳ ನಿವಾರಣೆಗೆ ಮಾರ್ಗೋಪಾಯ ಕಂಡುಕೊಳ್ಳುವಿಕೆ, ಕಾಫಿ ಗಿಡಗಳಿಗೆ ತಗಲುತ್ತಿರುವ ಮಾರಕ ರೋಗ, ಕೀಟಬಾಧೆಗೆ ಪರಿಹಾರ, ಹೊಸ ತಳಿಗಳಿಗೆ ಪ್ರೋತ್ಸಾಹ, ತಾಂತ್ರಿಕತೆಯ ಉನ್ನತೀಕರಣ ಮತ್ತು ಅಭಿವೃದ್ಧಿ, ಕಾಫಿ ಉತ್ಪನ್ನಗಳ ಗುಣಮಟ್ಟ ಹೆಚ್ಚಳದ ಬಗ್ಗೆಯೂ ಸಮಗ್ರ ಸಂಶೋಧನೆ ನಡೆಸಲು ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ಮತ್ತು ಟೀಯನ್ನು ಆಂತರಿಕ ಬಳಕೆ ಹೆಚ್ಚಳಕ್ಕೆ ಹೆಚ್ಚು ಪ್ರೋತ್ಸಾಹದ ಪ್ರಚಾರ ನೀಡುವ ಅಗತ್ಯವಿದೆ, ವಿಶ್ವವಿದ್ಯಾನಿಲಯಗಳು ಮತ್ತು ವಿವಿಧ ಸಂಘಸAಸ್ಥೆಗಳ ಸಹಯೋಗ ಪಡೆದು ಕಾಫಿ ಸೇರಿದಂತೆ ಕೃಷಿ ಬೆಳೆಗಳ ಉತ್ಪಾದನೆ ಹಾಗೂ ಮಾರುಕಟ್ಟೆ ವೃದ್ಧಿಗೆ ಸರ್ಕಾರ ಯೋಜನೆ ರೂಪಿಸುವಂತಾಗಬೇಕೆAದು ರಾಜೀವ್ ಸಲಹೆ ನೀಡಿದರು.
ಜಿ.ಎಸ್.ಟಿ. ಮಾಡಿ
ಕರಿಮೆಣಸಿಗೆ ಜಿಎಸ್ ಟಿ ವಿಧಿಸಿರುವ ಕೇಂದ್ರ ಸರ್ಕಾರ ಕರಿಮೆಣಸು ಕೃಷಿಕರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ, ಈ ನಿಟ್ಟಿನಲ್ಲಿ ಈಗಾಗಲೇ ಸಂಸದ ಯದುವೀರ್ ಮೂಲಕ ಕೇಂದ್ರದ ವಾಣಿಜ್ಯ ಸಚಿವರಿಗೆ ಮನವಿ ಮಾಡಲಾಗಿದ್ದು ಜಿಎಸ್ಟಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿ ಹಿಂಪಡೆಯುವ ನಿರೀಕ್ಷೆ ಇದೆ ಎಂದು ರಾಜೀವ್ ಆಶಾಭಾವನೆ ವ್ಯಕ್ತಪಡಿಸಿದರು.
ಕಾಫಿ ತೋಟಗಳ ನಿರ್ವಹಣೆಯೇ ಬೆಳೆಗಾರರಿಗೆ ಕಷ್ಟಕರವಾಗಿರುವ ಈ ದಿನಗಳಲ್ಲಿ ಬೆಳೆಗಾರರು ಸಾಲ ತೀರಿಸಿಲ್ಲ ಎಂಬ ಹಿನ್ನಲೆಯಲ್ಲಿ ಬ್ಯಾಂಕ್ಗಳು ಸರ್ಪೇಸಿ ಕಾಯಿದೆಯನ್ನು ಮುಂದಿಟ್ಟುಕೊAಡು ತೋಟಗಳ ಮೇಲೆ ಧಾಳಿ ನಡೆಸಿ ಬೆಳೆಗಾರರಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ಹೇಳಿದ ರಾಜೀವ್ ಗಣಪತಿ, ಸರ್ಪೇಸಿ ಕಾಯಿದೆಯನ್ನು ಜಾರಿಗೊಳಿಸುವ ಸಂದರ್ಭ ಕಾಫಿ ಕೃಷಿಕರನ್ನು ಕೃಷಿಕರೆಂದು ಪರಿಗಣಿಸದೇ ವ್ಯಾಪಾರಿಗಳಂತೆ ನೋಡಲಾಗುತ್ತಿದೆ ಎಂದೂ ವಿಷಾಧಿಸಿದರು.
ಹವಾಮಾನ ವೈಪರೀತ್ಯದಿಂದಾಗಿ ಅಕಾಲಿಕ ಮಳೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಕಾಫಿ ಕೃಷಿಯನ್ನು ತೋಟಗಾರಿಕೆ ಮತ್ತು ಕೃಷಿ ಬೆಳೆ ಎಂದೇ ಪರಿಗಣಿಸಿ ಕಾಫಿಯನ್ನು ಮಳೆ ಹಾನಿ ವಿಮಾ ಸೌಲಭ್ಯಕ್ಕೆ ಪರಿಗಣಿಸುವ ಅಗತ್ಯವಿದೆ ಎಂದು ಸರ್ಕಾರವನ್ನು ರಾಜೀವ್ ಒತ್ತಾಯಿಸಿದರು, ಅಂತೆಯೇ ಕಾಫಿ ಕೃಷಿಯನ್ನು ರಬ್ಬರ್ ಕೃಷಿಯಂತೆ ಕೇಂದ್ರ ಸರ್ಕಾರದ ಮನ್ರೇಗಾ ಯೋಜನೆಗೆ ಪರಿಗಣಿಸುವಂತೆ ಕಾಫಿ ಮಂಡಳಿಯನ್ನು ಆಗ್ರಹಿಸಿದ ರಾಜೀವ್, ಕಾಡಾನೆ ದಾಂಧಲೆ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಗಡಿಗಳಲ್ಲಿ ಅಗತ್ಯವಿರುವ ರೈಲ್ವೇ ಬ್ಯಾರಿಕೇಡ್ ಅಳವಡಿಕೆಗೆ ಹೆಚ್ಚಿನ ಅನುದಾನವನ್ನು ರಾಜ್ಯ ಸರ್ಕಾರ ನೀಡಬೇಕು. ದಾಂಧಲೆ ನಿರತ ಕಾಡಾನೆಗಳನ್ನು ವಿಳಂಬರಹಿತವಾಗಿ ಸೆರೆ ಹಿಡಿದು ಸ್ಥಳಾಂತರಿಸುವ ಮೂಲಕ ಕೃಷಿ ಫಸಲು ಹಾನಿ ಮತ್ತು ಜೀವಹಾನಿಯನ್ನು ತಡಗೆಟ್ಟಬೇಕು, ಕಾಡಿನಲ್ಲಿ ವನ್ಯಜೀವಿಗಳಿಗೆ ಅಗತ್ಯವಿರುವ ಆಹಾರವನ್ನು ಬೆಳೆಯುವ ಮೂಲಕ ಕಾಡು ಬಿಟ್ಟು ನಾಡಿಗೆ ಅವುಗಳು ಬಾರದಂತೆ ತಡೆಗಟ್ಟಬೇಕೆಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆಯಡಿಯಲ್ಲಿ ಕಾಫಿ ಕೃಷಿಯನ್ನು ಅಳವಡಿಸಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ನುಡಿದರು.
ಕೆಪಿಎ ಉಪಾಧ್ಯಕ್ಷ ಎ. ಅರವಿಂದ್ ರಾವ್, ಉಪಾಸಿ ಉಪಾಧ್ಯಕ್ಷ ಅಜಯ್ ತಿಮ್ಮಯ್ಯ, ಕಾರ್ಯದರ್ಶಿ ಆರ್ ಸಂಜಿತ್ ಸುದ್ದಿಗೋಷ್ಠಿಯಲ್ಲಿದ್ದರು. ೨ ದಿನಗಳ ಸಮ್ಮೇಳನದಲ್ಲಿ ಕರ್ನಾಟಕದ ವಿವಿಧೆಡೆಗಳ ಬೆಳೆಗಾರರು, ಕೃಷಿ ಉದ್ಯಮಿಗಳಲ್ಲದೇ ಊಟಿ, ಕೂನೂರು, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡಿನಿಂದಲೂ ಕೃಷಿಕರು, ಉದ್ಯಮಿಗಳು ಪಾಲ್ಗೊಂಡಿದ್ದಾರೆ. ಸಮ್ಮೇಳನದ ಅಂಗವಾಗಿ ಕೃಷಿ ಯಂತ್ರೋಪಕರಣಗಳು, ಕಾಫಿಯ ಹೊಸ ಆವಿಷ್ಕಾರಗಳ ಬಗೆಗಿನ ಪ್ರದರ್ಶನ ಮಳಿಗೆಗಳು ಗಮನ ಸೆಳೆದವು, ವಿಶೇಷವಾಗಿ ಬೆಣ್ಣೆ ಹಣ್ಣಿನಿಂದ ತಯಾರಿಸಲಾದ ವಿಶೇಷ ಖಾದ್ಯಗಳು ಸಮ್ಮೇಳನದಲ್ಲಿ ಪ್ರತಿನಿಧಿಗಳನ್ನು ಆಕರ್ಷಿಸಿದವು.