ಸೋಮವಾರಪೇಟೆ, ನ. ೧೮: ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ (ಕೃಷಿಗೆ ಯೋಗ್ಯವಲ್ಲದ ಭೂಮಿ) ಭೂಮಿ ತೆರವಿಗೆ ವಿರೋಧ ವ್ಯಕ್ತಪಡಿಸಿ ಡಿಸೆಂಬರ್ ತಿಂಗಳಲ್ಲಿ ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ. ಸುರೇಶ್ ಹೇಳಿದರು.
ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ. ಸುರೇಶ್ ಅಧ್ಯಕ್ಷತೆಯಲ್ಲಿ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಹಲವಾರು ದಶಕಗಳಿಂದ ರೈತರು ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಭೂಮಿ ಜಾಗ ರೈತರಿಗೆ ಸೇರಬೇಕಿದ್ದು, ಈಗ ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು, ಸರ್ವೆಗೆ ಮುಂದಾಗಿರುವುದು ರೈತರಲ್ಲಿ ಆತಂಕ ಹುಟ್ಟಿಸಿದೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಮಾತನಾಡಿ, ಪ್ರತಿಭಟನೆ, ಧರಣಿ, ಅಹೋರಾತ್ರಿ ಪ್ರತಿಭಟನೆಯ ಮೂಲಕ ನ್ಯಾಯ ಪಡೆದುಕೊಳ್ಳವ ಅವಕಾಶವಿದೆ. ರೈತರನ್ನು ಪ್ರತಿನಿಧಿಸುವ ರಾಜ್ಯ ಸರ್ಕಾರ ವಕೀಲರನ್ನು ನೇಮಿಸಿಕೊಂಡು ರೈತರಿಗೆ ನ್ಯಾಯ ಕೊಡಿಸುವುದು ಅವರ ಕರ್ತವ್ಯ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್ ಮಾತನಾಡಿ, ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ರೈತರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಜಿಲ್ಲೆಯ ಶಾಸಕರುಗಳು ಸಂಸತ್ ಸದಸ್ಯರು ತಮ್ಮ ಇತಿಮಿತಿಯೊಳಗೆ ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಶೀಘ್ರದಲ್ಲೇ ಅರಣ್ಯ ಸಚಿವರು, ಕಂದಾಯ ಸಚಿವ ಉಪಸ್ಥಿತಿಯಲ್ಲಿ ಜಿಲ್ಲೆಯಲ್ಲೇ ರೈತರೊಂದಿಗಿನ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು.
ಜನಪ್ರತಿನಿಧಿಗಳು ಪಕ್ಷಭೇದ ಮರೆತು ರೈತರ ಪರ ನಿಲ್ಲಬೇಕು. ಎಂದು ಸೋಮವಾರಪೇಟೆ ತಾಲ್ಲೂಕು ರೈತ ಹೋರಾಟ ಸಮಿತಿ ಕೆ.ಬಿ. ಸುರೇಶ್ ಮನವಿ ಮಾಡಿದರು. ಆಸ್ತಿ ಕಳೆದುಕೊಂಡು ಹೆಚ್ಚಿನ ರೈತರು ಬೀದಿ ಪಾಲಾಗುವ ಆತಂಕ ಎದುರಿಸುವಂತಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಹೇಳಿದರು.
ಸೋಮವಾರಪೇಟೆ ತಾಲೂಕಿನಲ್ಲಿ ಸಿ ಆ್ಯಂಡ್ ಡಿ ಭೂಮಿ, ಅರಣ್ಯ ಒತ್ತುವರಿ, ಪೈಸಾರಿ ಒತ್ತುವರಿ ಎಷ್ಟು ಆಗಿದೆ ಎಂದು ವೈಜ್ಞಾನಿಕ ಸರ್ವೆಯಾಗಬೇಕು. ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಬೇಕು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಕುಮಾರ್ ಹೇಳಿದರು.
ವಕೀಲ ಬಿ.ಜೆ. ದೀಪಕ್ ಮಾತನಾಡಿ, ಹಿಂದೆ ಸಿ ಆ್ಯಂಡ್ ಡಿ (ಕೃಷಿಗೆ ಯೋಗ್ಯವಲ್ಲದ ಭೂಮಿ) ಭೂಮಿ ಎಂದು ಕಂದಾಯ ಇಲಾಖೆಯ ಕಡತದಲ್ಲಿ ದಾಖಲಾಯಿತು. ನಂತರ ರೈತರು ಒತ್ತುವರಿ ಮಾಡಿಕೊಂಡು ಕಾಫಿ ಬೆಳೆದರು. ಈಗÀ ಕೃಷಿಯೋಗ್ಯ ಭೂಮಿಯಾಗಿದೆ. ಆ ಜಾಗವನ್ನು ಈಗ ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲಾಗುತ್ತಿದೆ. ಬೆಟ್ಟಗುಡ್ಡ, ದೇವರಕಾಡು ಯಾವುದೂ ಒತ್ತುವರಿಯಾಗಿಲ್ಲ. ಕಂದಾಯ ಇಲಾಖೆ, ಅರಣ್ಯ ಇಲಾಖೆಯಿಂದ ಜಂಟಿ ಸರ್ವೆಯಾಗಿ ಕೃಷಿಗೆ ಯೋಗ್ಯವಲ್ಲದ ಭೂಮಿ ಯಾವುದು ಎಂಬುದು ಸ್ಪಷ್ಟವಾಗಬೇಕು ಎಂದು ಹೇಳಿದರು. ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್, ಸಮಿತಿಯ ದಿವಾಕರ್, ಯೋಗೇಂದ್ರ ಇದ್ದರು.