ಮಡಿಕೇರಿ, ನ. ೧೮: ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದವರು ತಾವು ವಿದ್ಯೆ ಕಲಿತ ಶಾಲೆಯ ಅಭ್ಯುದಯಕ್ಕಾಗಿ ತಮ್ಮ ಆದಾಯದ ಶೇ.೧ ಭಾಗವನ್ನಾದರೂ ಮೀಸಲಿಡಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಕರೆ ನೀಡಿದ್ದಾರೆ.

೨೦೨೩-೨೪ನೇ ಸಾಲಿನ ಪರೀಕ್ಷೆಯಲ್ಲಿ ಮಡಿಕೇರಿ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬರಲು ಕಾರಣಕರ್ತರಾದ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕಳೆದ ೩೫ ವರ್ಷಗಳಿಂದ ಶಿಕ್ಷಣಕ್ಕೆ ಆದ್ಯತೆ ನೀಡಿ ಸಂಘಟನೆ ವತಿಯಿಂದ ನಿರಂತರವಾಗಿ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಸನ್ಮಾನಿಸುತ್ತಾ ಬರಲಾಗುತ್ತಿದೆ. ಸರ್ಕಾರಿ ಶಾಲೆಗಳು ಶೇ.೧೦೦ರಷ್ಟು ಗುರಿ ಸಾಧಿಸಬೇಕು, ಆ ಮೂಲಕ ಬಡ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೆಚ್.ಎಲ್. ದಿವಾಕರ್ ಹೇಳಿದರು.

ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸುಂಟಿಕೊಪ್ಪ ಕೂಬ ಮಸೀದಿ ಅಧ್ಯಕ್ಷ, ಸಮಾಜ ಸೇವಕ ಹೆಚ್.ಯು.ಇಸಾಕ್ ಖಾನ್ ಮಾತನಾಡಿ ವಿದ್ಯಾರ್ಥಿಗಳು ಸಂಪಾದನೆಯ ದೃಷ್ಟಿಯಿಂದ ಮಾತ್ರ ಶಿಕ್ಷಣವನ್ನು ಪಡೆಯಬಾರದು. ಜಾತಿ, ಧರ್ಮ, ಬೇಧ, ಭಾವ ಎಲ್ಲವನ್ನೂ ಮೀರಿ ಮನಷ್ಯತ್ವಕ್ಕೆ ಬೆಲೆ ಕೊಡುವ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಡಾ.ಬಿ.ಆರ್.ಅAಬೇಡ್ಕರ್ ಅವರ ಸಂವಿಧಾನದ ಮೂಲ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ಅವರ ಆಶಯಗಳನ್ನು ಸಾಕಾರಗೊಳಿಸಲು ದೇಶದ ಪ್ರತಿಯೊಬ್ಬರೂ ಮುಂದಾಗಬೇಕು. ಪ್ರತಿಯೊಬ್ಬರಿಗೂ ವಿದ್ಯೆ ಬಹಳ ಮುಖ್ಯ, ಸಮಾಜವನ್ನು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡುವುದು ಶಿಕ್ಷಣದ ಮುಖ್ಯ ಉದ್ದೇಶವಾಗಿದೆ. ಮನುಷ್ಯತ್ವ, ಮಾನವ ಮೌಲ್ಯಗಳಿಗೆ ಬೆಲೆ ಕೊಟ್ಟು ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಲು ಕರೆ ನೀಡಿದರು.

ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಬಹಳ ಮುಖ್ಯ. ಶಿಸ್ತುಬದ್ಧ ಜೀವನದಿಂದ ಮಾತ್ರ ಸಾಧನೆ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ, ಮಕ್ಕಳ ಬಗ್ಗೆ ಪೋಷಕರು ಹೆಚ್ಚು ಜವಾಬ್ದಾರಿ ವಹಿಸಬೇಕು. ವಿದ್ಯಾರ್ಥಿಗಳು ಮೊಬೈಲ್‌ಗಳಲ್ಲಿ ಒಳ್ಳೆಯ ವಿಚಾರವನ್ನು ಪಡೆದುಕೊಂಡು, ಪುಸ್ತಕ ಓದುವ ಹವ್ಯಾಸದೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಬೇಕು. ಧರ್ಮ ಯಾವುದಾದರೇನು ಮನುಷ್ಯ ಒಳ್ಳೆಯವನಾಗಬೇಕು. ಆಗ ಮಾತ್ರ ಸಮಾಜದಲ್ಲಿ ಸುಸ್ಥಿರತೆಯನ್ನು ಕಾಣಲು ಸಾಧ್ಯ ಎಂದರು.

ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ಎ.ಪಿ.ದೀಪಕ್ ಪೊನ್ನಪ್ಪ ಮಾತನಾಡಿ, ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಂಡು ಉತ್ತಮ ಶಿಕ್ಷಣವನ್ನು ಪಡೆದುಕೊಂಡರೆ ಸಮಾಜದ ಬಗ್ಗೆ ಅರಿತು ಕೊಳ್ಳಬಹುದು, ಆಗ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರು.

ಸಮಾಜವನ್ನು ಅರಿತುಕೊಳ್ಳಲು ಪುಸ್ತಕಗಳನ್ನು ಓದುವುದರಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಸಾಹಿತ್ಯಕ್ಕೆ ಸಂಬAಧಿಸಿದ ಪುಸ್ತಕವನ್ನು ಹೆಚ್ಚು ಹೆಚ್ಚು ಓದಬೇಕು. ಸಾಧನೆಗೆ ಹೆಣ್ಣು, ಗಂಡು ಎಂಬ ಬೇಧ, ಭಾವವಿಲ್ಲ. ಆದರೆ ಛಲ ಮತ್ತು ಗುರಿ ಇರಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಸದಸ್ಯೆ ಪ್ರೇಮಾ ಕೃಷ್ಣಪ್ಪ, ಕುಮಾರ್, ಸಿದ್ದೇಶ್ವರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.