ಮಡಿಕೇರಿ, ನ.೧೮ : ಕದನೂರು ಗ್ರಾಮ ಪಂಚಾಯಿತಿಗೆ ಒಳಪಡುವ ಅರಮೇರಿ ಗ್ರಾಮದಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ಕಲ್ಲಿನ ಕ್ರಷರ್ ಘಟಕ ಸ್ಥಾಪನೆಗೆ ಕೆಲವು ಕಾಣದ ಕೈಗಳು ಕಾರ್ಯನಿರ್ವಹಿಸುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟವನ್ನು ನಡೆಸುವುದಾಗಿ ಕಡಂಗಮರೂರು ಹಾಗೂ ಅರಮೇರಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅರಮೇರಿ ಗ್ರಾಮಸ್ಥರಾದ ಪೂಳಂಡ ಎಸ್.ಮಾಚಯ್ಯ ಮಾತನಾಡಿ, ಕದನೂರು ಗ್ರಾ.ಪಂಗೆ ಒಳಪಡುವ ಅರಮೇರಿ ಗ್ರಾಮದ ಖಾಸಗಿ ಜಾಗದ ೧ ಏಕ್ರೆ ಪ್ರದೇಶದಲ್ಲಿ ಕಲ್ಲಿನ ಕ್ರಷರ್ ಘಟಕ ಸ್ಥಾಪಿಸಲು ವ್ಯಕ್ತಿಯೊಬ್ಬರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಇದು ವೀರಾಜಪೇಟೆ ತಹಶೀಲ್ದಾರ್ ಮುಖಾಂತರ ಕಂದಾಯ ಇಲಾಖೆಗೆ ಸಲ್ಲಿಸಲಾಗಿದೆ. ನಂತರ ದಿನಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಪರಿವೀಕ್ಷಕರು, ಕದನೂರು ಗ್ರಾ.ಪಂ ಹಾಗೂ ಅರಮೇರಿ ಗ್ರಾಮಸ್ಥರ ಸಮ್ಮುಖದಲ್ಲಿ ಜಂಟಿ ಸ್ಥಳ ಪರಿಶೀಲನೆಗೆ ತಿಳುವಳಿಕೆ ಪತ್ರವನ್ನು ನೀಡಲಾಗಿದೆ. ಉದ್ದೇಶಿತ ಘಟಕ ಸ್ಥಾಪಿಸುವ ಪ್ರದೇಶದ ಸುತ್ತಲು ವಾಸವಿರುವ ಹಾಗೂ ಜಮೀನು ಹೊಂದಿರುವ ಕಡಂಗಮರೂರು ಗ್ರಾಮಸ್ಥರಿಗೆ ಇಲಾಖೆಯಿಂದ ಯಾವುದೇ ತಿಳುವಳಿಕೆ ಪತ್ರ ನೀಡಿರುವುದಿಲ್ಲ.

ಘಟಕ ಸ್ಥಾಪನೆ ಪ್ರದೇಶದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಡೆಸಿದ ಡ್ರೋನ್ ಸರ್ವೆಯಲ್ಲಿ ೫೦೦ಮೀ ಬಫರ್ ಜೋನ್ ಎಂದು ಗುರುತಿಸಿರುವ ಪ್ರದೇಶದ ವ್ಯಾಪ್ತಿಯೊಳಗೆ ಕಡಂಗಮರೂರು ಹಾಗೂ ಅರಮೇರಿ ಗ್ರಾಮದ ೫೦ ವಾಸದ ಮನೆಗಳು ಹಾಗೂ ಕೃಷಿ ಭೂಮಿಗಳು ಗುರುತಿಸಲ್ಪಟ್ಟಿದೆ. ಈ ಉದ್ದೇಶಿತ ಘಟಕ ಸ್ಥಾಪಿಸುವ ಪ್ರದೇಶದಲ್ಲಿ ಭೂ ಪರಿವರ್ತನೆಗೆ ಅನುಮತಿ ನೀಡದಿರುವಂತೆ ಕಡಂಗಮರೂರು ಗ್ರಾಮಸ್ಥರು ವೀರಾಜಪೇಟೆ ತಾಲೂಕು ತಹಶೀಲ್ದಾರರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ, ಕಂದಾಯ ಪರಿವೀಕ್ಷಕರು, ವೀರಾಜಪೇಟೆ ಡಿ.ವೈ.ಎಸ್ಪಿ, ವಲಯ ಅರಣ್ಯಾಧಿಕಾರಿ, ಕದನೂರು ಹಾಗೂ ಕಾಕೋಟುಪರಂಬು ಗ್ರಾ.ಪಂ ಸೇರಿದಂತೆ ಸಂಬAಧಿಸಿದ ಇಲಾಖೆಗೆ ಆಕ್ಷೇಪ ವ್ಯಕ್ತಪಡಿಸಿ ಭೂ ಪರಿವರ್ತನೆ ಮಾಡದಂತೆ ಮನವಿಯನ್ನು ಸಲ್ಲಿಸಿದರೂ ಕಡಂಗಮರೂರು ಗ್ರಾಮಸ್ಥರಿಗೆ ಜಂಟಿ ಸ್ಥಳ ಪರಿಶೀಲನೆಗೆ ತಿಳುವಳಿಕೆ ಪತ್ರವನ್ನು ಇಲಾಖೆ ಅಧಿಕಾರಿಗಳು ನೀಡದಿರುವುದು ಖಂಡನೀಯ ಎಂದರು.

ಜಂಟಿ ಸ್ಥಳ ಪರಿಶೀಲನೆಯ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದು ಅರಮೇರಿ ಹಾಗೂ ಕಡಂಗಮರೂರಿನ ನೂರಾರು ಗ್ರಾಮಸ್ಥರು ಘಟಕ ಸ್ಥಾಪಿಸುವ ಪ್ರದೇಶದಲ್ಲಿ ಹಾಜರಿದ್ದು, ಘಟಕ ಸ್ಥಾಪನೆಗೆ ತಹಶೀಲ್ದಾರ್ ಸಮ್ಮುಖದಲ್ಲಿ ಆಕ್ಷೇಪಣೆ ಸಲ್ಲಿಸಿದರೂ ಇಬ್ಬರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಎಂದು ಹೇಳಿರುವುದು ಸತ್ಯಕ್ಕೆ ದೂರ ಎಂದರು. ಕ್ರಷರ್ ಘಟಕ ಸ್ಥಾಪಿಸಲು ಉದ್ದೇಶಿತ ಪ್ರದೇಶವು ಕಾಕೋಟು ಪರಂಬು ಗ್ರಾ.ಪಂ ಒಳಪಡುವ ಕಡಂಗಮರೂರು ಗ್ರಾಮದ ಗಡಿಭಾಗದಲ್ಲಿ ಇರುತ್ತದೆ. ಈ ಪ್ರದೇಶ ಸುತ್ತಮುತ್ತಲಿನ ಶೇ.೭೫ ರಷ್ಟು ಭಾಗದಲ್ಲಿ ಕಡಂಗಮರೂರು ಗ್ರಾಮದ ಬಲ್ಲಟ್ಟಿಕಾಳಂಡ, ಬಲ್ಯಂಡ, ಚೋಳಂಡ, ಕೋದಂಡ, ಬಲ್ಲಚಂಡ, ಬೆಳೆಗಾರರ ಕುಟುಂಬದವರು ಹಾಗೂ ಪ.ಜಾತಿಯವರ ಮಾರಿಯಮ್ಮ ಕಾಲೋನಿಯಲ್ಲಿನ ನಿವಾಸಿಗಳು ತಲತಲಾಂತರದಿAದ ವಾಸವಾಗಿದ್ದು, ನಮ್ಮ ಬದುಕಿಗೆ ಅವಲಂಬಿತರಾಗಿರುವ ಭತ್ತದ ಗದ್ದೆ, ಕಾಫಿ ತೋಟ, ಅಡಿಕೆ, ಕಾಳು ಮೆಣಸು, ಬಾಳೆ ತೋಟಗಳು ಮತ್ತು ಎಲ್ಲಾ ಕುಟುಂಬಸ್ಥ ಐನ್ ಮನೆಗಳು ಹಾಗೂ ವಾಸದ ಮನೆಗಳು, ದೇವಸ್ಥಾನ, ಅಂಗನವಾಡಿ, ಧವಸ ಭಂಡಾರ ಈ ವ್ಯಾಪ್ತಿಯಲ್ಲಿದೆ. ಅಲ್ಲದೇ ಅರಮೇರಿ ಗ್ರಾಮ, ಪೂಳಂಡ, ಬಾಚಿರ, ಸೋಮೆಯಂಡ, ಉದಿಯಂಡ, ನಾಯಕಂಡ, ಪೊಯ್ಯೋಟಿರ, ಅಳಮಂಡ, ಪರಿಶಿಷ್ಟ ವರ್ಗದ ಅಂದಾಜು ೭೫ ಕುಟುಂಬಸ್ಥರ ವಾಸದ ಮನೆಗಳಿದ್ದು, ಘಟಕ ಸ್ಥಾಪನೆಯಿಂದ ಈ ಮನೆಗಳಿಗೆ ಹಾನಿ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕಡಂಗಮರೂರು ಗ್ರಾ.ಪಂ ಮಾಜಿ ಸದಸ್ಯೆ ಕೋದಂಡ ಮಂಜುಳಾ ಅಯ್ಯಪ್ಪ ಮಾತನಾಡಿ, ಕಡಂಗಮರೂರು ವಾರ್ಡ್ ಸಭೆಯಲ್ಲಿ ಹಾಗೂ ಕದನೂರು ಗ್ರಾ.ಪಂ ಯ ಸಾಮಾನ್ಯ ಸಭೆಯಲ್ಲಿ ಎರಡು ಗ್ರಾಮಸ್ಥರು ಕ್ರಷರ್ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಪಂಚಾಯಿತಿಯಿAದ ನಿರಾಪೇಕ್ಷಣಾ ಪತ್ರ ನೀಡಲು ಸಾಧ್ಯವಿಲ್ಲವೆಂದು ಉಭಯ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ವೀರಾಜಪೇಟೆ ತಹಶೀಲ್ದಾರರಿಗೆ ಮಾಹಿತಿ ಪತ್ರ ನೀಡಿದ್ದಾರೆ ಎಂದರು. ಘಟಕ ಸ್ಥಾಪನಾ ಸ್ಥಳವು ಎತ್ತರದ ಪ್ರದೇಶದಲ್ಲಿ ಇದ್ದು, ಮಳೆಗಾಲದಲ್ಲಿ ಇಲ್ಲಿಂದ ಹರಿಯುವ ಕಲ್ಲು, ಮಣ್ಣು ಮಿಶ್ರಿತ ನೀರು ಕೆಳ ಪ್ರದೇಶದಲ್ಲಿ ಇರುವ ಬಲ್ಲಟ್ಟಿಕಾಳಂಡ, ಬಲ್ಯಂಡ, ಚೋಳಂಡ, ಕೋದಂಡ ಕುಟುಂಬಸ್ಥರ ಭತ್ತದ ಗದ್ದೆಗಳಲ್ಲಿ ಶೇಖರಣೆಗೊಂಡು ಮುಂದಿನ ದಿನಗಳಲ್ಲಿ ಭತ್ತದ ಕೃಷಿ ಮಾಡಲು ಅಸಾಧ್ಯವಾಗಲಿದೆ. ಕ್ರಷರ್ ಘಟಕದಿಂದ ಹೊರಬರುವ ಧೂಳಿನಿಂದ ಮತ್ತು ಬಳಸುವ ರಾಸಾಯನಿಕದಿಂದ ಅತಿ ಸಣ್ಣ ಬೆಳೆಗಾರರಾಗಿರುವ ಸುತ್ತಮುತ್ತಲಿರುವ ಕಾಫಿ ತೋಟದ ಮೇಲೆಲ್ಲ ಆವರಿಸಿ ಫಸಲು ಕುಂಠಿತವಾಗಿ ಆರ್ಥಿಕ ಸಂಕಷ್ಟ ಉಂಟಾಗಬಹುದು. ಅಲ್ಲದೇ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ, ಜಾನುವರುಗಳಿಗೂ ಹಾಗೂ ಜಲ ಮೂಲಕ್ಕೂ ತೀರ್ವವಾದ ಹಾನಿಯುಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಗಣಿಕಾರಿಕೆಗೆ ಕಲ್ಲು ಸಿಡಿಸುವಾಗ ಉಂಟಾಗುವ ಭೂಮಿಯ ಕಂಪನದಿAದ ಮನೆಗಳು ಹಾಗೂ ಐನ್‌ಮನೆಗಳು ಬಿರುಕು ಬಿಟ್ಟು ಅಪಾರ ಹಾನಿ ಸಂಭವಿಸಬಹುದು. ಆದ್ದರಿಂದ ಘಟಕಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಅರಮೇರಿ ಗ್ರಾಮಸ್ಥರಾದ ಟಿ.ಎನ್.ತುನುಜ್ ಕುಮಾರ್, ಕಾಕೋಟು ಪರಂಬು ಗ್ರಾ.ಪಂ ಉಪಾಧ್ಯಕ್ಷ ಚೋಳಂಡ ಸುಗುಣ ಪೊನ್ನಪ್ಪ ಕಡಂಗಮರೂರು ಗ್ರಾಮಸ್ಥರಾದ ಬಲ್ಯಂಡ ಸಿ.ನಂದಾ ಮುತ್ತಣ್ಣ, ಬಲ್ಲಟ್ಟಿಕಾಳಂಡ ಪಿ.ಮುದ್ದಯ್ಯ ಉಪಸ್ಥಿತರಿದ್ದರು.