ಶನಿವಾರಸಂತೆ, ನ. ೧೮: ಶನಿವಾರಸಂತೆಯ ವಿವಿಧ ದೇವಾಲಯಗಳ ಹುಂಡಿ ಹಣ ಕಳ್ಳತನ ಪ್ರಕರಣದ ಆರೋಪಿ ಯನ್ನು ಶನಿವಾರಸಂತೆ ಪೊಲೀಸರು ಬಂಧಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ತಣ್ಣೀರುಹಳ್ಳ ವಿಜಯನಗರ ಮೂಲದ ಮುಬಾರಕ್ ಪಾಶ (೩೪) ಬಂಧಿತ ಆರೋಪಿ.

೨ ವಾರಗಳ ಹಿಂದೆ ಶನಿವಾರ ಸಂತೆಯ ಶ್ರೀವಿಜಯ ವಿನಾಯಕ ದೇವಾಲಯ, ಶ್ರೀರಾಮ ಮಂದಿರದಲ್ಲಿ ಹಾಗೂ ಕೊಡ್ಲಿಪೇಟೆಯ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಹುಂಡಿಗಳ ಹಣ ಒಟ್ಟು ರೂ.೩೦,೭೭೭ ಕಳ್ಳತನವಾಗಿತ್ತು. ಶ್ರೀವಿಜಯ ವಿನಾಯಕ ದೇವಾಲಯದ ಅಧ್ಯಕ್ಷ ಎಸ್.ಆರ್.ಮಧು, ಶ್ರೀರಾಮ ಮಂದಿರದ ಅಧ್ಯಕ್ಷ ಡಿ.ಅರವಿಂದ್ ಹಾಗೂ ಕೊಡ್ಲಿಪೇಟೆಯ ಶ್ರೀಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಎಸ್.ಎಸ್.ವರಪ್ರಸಾದ್ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತ ಮುಬಾರಕ್ ಕಳ್ಳತನವನ್ನು ವೃತ್ತಿಯಾಗಿಸಿಕೊಂಡಿದ್ದ. ಹಾಸನ, ಮಂಡ್ಯ, ಮೈಸೂರಿನ ವಿವಿಧೆಡೆ ಕಳ್ಳತನ ಮಾಡಿ ಜಾಮೀನು ಪಡೆದು ಬಿಡುಗಡೆಗೊಂಡು ನ್ಯಾಯಾಲಯಕ್ಕೆ ಹಾಜರಾಗದೆ

(ಮೊದಲ ಪುಟದಿಂದ) ತಲೆಮರೆಸಿಕೊಂಡು ಕಳ್ಳತನ ಮುಂದುವರಿಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಹೆಚ್ಚುವರಿ ಎಸ್ಪಿ ಸುಂದರ್ ರಾಜ್ ಮಾರ್ಗದರ್ಶನ, ಡಿವೈಎಸ್ಪಿ ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ನೇತೃತ್ವ, ಶನಿವಾರಸಂತೆ ಠಾಣೆಯ ಪಿಎಸ್‌ಐಗಳಾದ ಗೋವಿಂದ್ ರಾಜ್, ಎಚ್.ವೈ. ಚಂದ್ರ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಮಹೇಶ್, ಶಿವಪ್ಪ, ಶಶಿಕುಮಾರ್, ಧನಂಜಯ್, ಹರ್ಷ, ನಿಶಾ, ಸಿ.ಡಿ.ಆರ್ ವಿಭಾಗದ ಸಿಬ್ಬಂದಿ ರಾಜೇಶ್, ಪ್ರವೀಣ್, ಶಿವಕುಮಾರ್, ಹೋಂ ಗಾರ್ಡ್ ಹರೀಶ್ ಪಾಲ್ಗೊಂಡಿದ್ದರು. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಕಳ್ಳತನ ಮಾಡಿದ್ದ ರೂ.೩೦,೭೭೭ ನಗದು ಹಾಗೂ ೨ ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.