ಸೋಮವಾರಪೇಟೆ,ನ.೧೮: ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ಪತಿ, ಪತ್ನಿ ಹಾಗೂ ಪುತ್ರನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿ ಕಾರಿನ ಗಾಜನ್ನು ಒಡೆದ ಘಟನೆ ನಡೆದಿದ್ದು, ಹಲ್ಲೆಗೊಳಗಾದವರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ದೂರು ನೀಡಿದ್ದಾರೆ.

ತಣ್ಣೀರುಹಳ್ಳ ಗ್ರಾಮದ ನಂಗಾರು ಹೇಮಂತ್, ಪತ್ನಿ ನಯನ, ಪುತ್ರ ಗಗನ್ ಅವರುಗಳ ಮೇಲೆ ಅದೇ ಗ್ರಾಮದ ಸೋಮಣ್ಣ ಹಾಗೂ ಪುತ್ರ ಸಂಪತ್ ಅವರುಗಳು ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಣ್ಣೀರುಹಳ್ಳ ಗ್ರಾಮದಲ್ಲಿ ಮನೆ ಹಾಗೂ ತೋಟ ಹೊಂದಿರುವ ಹೇಮಂತ್ ಅವರು ತನ್ನ ತೋಟದಲ್ಲಿ ಬೆಳೆದಿದ್ದ ಸಿಲ್ವರ್ ಮರಗಳನ್ನು ಟಿಂಬರ್‌ಗೆ ನೀಡಿದ್ದು, ಇಂದು ಕಟಾವು ಮಾಡಿಸುತ್ತಿದ್ದ ಸಂದರ್ಭ ಆಗಮಿಸಿದ ಸೋಮಣ್ಣ ಹಾಗೂ ಸಂಪತ್ ಸೇರಿದಂತೆ ಇತರರು ಕತ್ತಿ ಹಾಗೂ ಕೋವಿಯೊಂದಿಗೆ ಆಗಮಿಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಂತರ ಮನೆಗೆ ಆಗಮಿಸಿ ಮೂವರ ಮೇಲೆ ಹಲ್ಲೆ ನಡೆಸಿದ್ದು, ಪರಿಣಾಮ ಹೇಮಂತ್ ಅವರ ತಲೆ, ಕಿವಿ ಭಾಗ, ಎದೆಗೆ ಪೆಟ್ಟಾಗಿದೆ. ಇದರೊಂದಿಗೆ ನಯನ ಅವರ ಭುಜ, ತೋಳಿಗೆ ಏಟಾಗಿದ್ದರೆ, ಪುತ್ರ ಗಗನ್‌ನ ಬೆನ್ನು, ಎದೆ ಹಾಗೂ ಕೈಗೆ ಗಾಯವಾಗಿದೆ. ಈ ಸಂದರ್ಭ ಸ್ಥಳೀಯ ಕಾರ್ಮಿಕರು ಬಿಡಿಸಲು ಮುಂದಾಗಿದ್ದು, ಅವರುಗಳ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಹೇಮಂತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ತಮ್ಮ ಕಾರಿನಲ್ಲಿ ಆಗಮಿಸುತ್ತಿದ್ದಂತೆ ಮನೆಯ ಗೇಟ್ ಬಳಿ ದೊಣ್ಣೆಯಿಂದ ಸೋಮಣ್ಣ ಕಾರಿನ ಮೇಲೆ ಹಲ್ಲೆ ನಡೆಸಿದ್ದು, ಕಾರಿನ ಮುಂಭಾಗದ ಗಾಜು ಪುಡಿಯಾಗಿದೆ. ಹಲ್ಲೆ ನಡೆಸುತ್ತಿರುವ ವೀಡಿಯೋ ಚಿತ್ರೀಕರಣಗಳು ಲಭ್ಯವಾಗಿದ್ದು, ಪೊಲೀಸರಿಗೆ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಹೇಮಂತ್ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳು, ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಹೆಚ್ಚಿನ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.