ಸುಂಟಿಕೊಪ್ಪ, ನ. ೧೮: ರೈತ ಸಮುದಾಯ ಪಕ್ಷಾತೀತ ಮತ್ತು ಜಾತ್ಯತೀತ ನೆಲೆಗಟ್ಟಿನಲ್ಲಿ ಸಂಘಟಿತ ರಾಗದಿದ್ದರೆ ನಮಗೆ ಉಳಿಗಾಲ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಎಚ್ಚರಿಸಿದರು.
ಮನು ಸೋಮಯ್ಯ ಅವರು ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಿ.ಎಂ. ಗುಂಡುಗುಟ್ಟಿ ಜಿ. ಎಂ. ಮಂಜುನಾಥಯ್ಯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ರಚನೆ ಕುರಿತ ಪೂರ್ವ ಬಾವಿ ಸಭೆಯಲ್ಲಿ ಮಾತನಾಡಿದರು.
ಕೊಡಗು ಹೊರತುಪಡಿಸಿದಂತೆ ಇತರ ಎಲ್ಲಾ ಜಿಲ್ಲೆಗಳಲ್ಲಿ ರೈತರ ಕೃಷಿ ಉಪಯೋಗಕ್ಕಾಗಿ ೧೦ ಎಚ್‌ಪಿ ಪಂಪ್‌ಸೆಟ್ ಬಳಕೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ನಮ್ಮಲ್ಲಿ ಮೀಟರ್ ಅಳವಡಿಸಲು ಅವಕಾಶ ನೀಡಿದ್ದು, ಮೊದಲ ತಪ್ಪು ಎಂದು ಹೇಳಿದ ಅವರು ಮೀಟರ್ ಅಳವಡಿಕೆಯಿಂದ ಸಹಜವಾಗಿಯೇ ಮೀಟರ್ ರೀಡಿಂಗ್ ಮತ್ತು ಬಿಲ್ ಬರುವ ಹಿನ್ನಲೆಯಲ್ಲಿ ನಾವು ಗ್ರಾಹಕರಾಗುತ್ತೇವೆ ಬಿಲ್ ಪಾವತಿಸದಿರಲು ಹೇಗೆ ಸಾಧ್ಯವೆಂದು ಅವರು ಪ್ರಶ್ನಿಸಿದರು. ಇದೇ ರೀತಿ ಆನೆ ಮಾನವ ಸಂಘರ್ಷ ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ ಎಂದು ಮನು ಸೋಮಯ್ಯ ನುಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಾಗಚೆಟ್ಟಿರ ಪೊನ್ನಪ್ಪ, ಸುಂಟಿಕೊಪ್ಪ ಹೋಬಳಿ ಸೇರಿದಂತೆ ಚೆಟ್ಟಳ್ಳಿ, ನಂಜರಾಯಪಟ್ಟಣ ಮತ್ತು ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿನ ರೈತರನ್ನು ಒಳಗೊಂಡು ನಾವೆಲ್ಲರೂ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತ ಸಂಘದ ಘಟಕ ಒಂದನ್ನು ರಚನೆ ಮಾಡುವ ಸಲುವಾಗಿ ಈ ಸಭೆಯನ್ನು ಕರೆಯಲಾಗಿದೆ. ಈಗಾಗಲೇ ರಾಜಕೀಯ ವ್ಯಕ್ತಿಗಳಿಂದ ಹಿಡಿದು ಜನಪ್ರತಿನಿಧಿಗಳ ಸಹಿತ ಮುಖ್ಯ ಮಂತ್ರಿಗಳವರೆಗೆ ಭೇಟಿ ಮಾಡಿ ನಮ್ಮ ಅಹವಾಲು ಮನವಿ ಕಷ್ಟ ನಷ್ಟಗಳನ್ನು ಹೇಳಿಕೊಂಡಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಕೊಡಗಿನ ರೈತರು ಚೆನ್ನಾಗಿದ್ದಾರೆ. ನಮ್ಮ ವೇಷಭೂಷಣ, ಮನೆ ಕಾಫಿ ತೋಟಗಳ ಹಿನ್ನೆಲೆಯಲ್ಲಿ ನಮ್ಮ ಕಷ್ಟಗಳನ್ನು ಆಲಿಸುವವರು ಇಲ್ಲ. ಎಲ್ಲಾ ಸರಕಾರಗಳು ಕೊಡಗಿಗೆ ಒಂದು ನೀತಿ, ವಿವಿಧ ಜಿಲ್ಲೆಗಳಿಗೆ ಒಂದು ನೀತಿ ಮಾಡುತ್ತ ತಾರತಮ್ಯ ಮಾಡುತ್ತಿವೆ. ಆನೆ, ಹುಲಿ ಹಾಗೂ ಇತರೆ ವನ್ಯಪ್ರಾಣಿಗಳಿಂದ ಕೃಷಿ ಫಸಲು ನಷ್ಟದೊಂದಿಗೆ ಜೀವಹಾನಿಯೂ ಸಂಭವಿಸುತ್ತಿದೆ. ಇದರಿಂದಾಗಿ ಜಾತ್ಯತೀತ ಮತ್ತು ಪಕ್ಷಾತೀತ ನೆಲೆಗಟ್ಟಿನಲ್ಲಿ ಸಂಘಟಿತರಾಗಬೇಕು ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ಕೊಡಗಿನಲ್ಲಿ ಕಳೆದ ೧೨ ವರ್ಷಗಳಿಂದ ಸಕ್ರಿಯವಾಗಿರುವ ರೈತ ಸಂಘ ಸಾಕಷ್ಟು ಹೋರಾಟಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಮಾಡಿ ಯಶಸ್ಸು ಕಂಡಿದೆ. ಕೊಡಗು ಪುಟ್ಟ ಜಿಲ್ಲೆಯಾಗಿದ್ದರೂ ರಾಜ್ಯ ಮತ್ತು ರಾಷ್ಟçಕ್ಕೆ ನಮ್ಮ ಕೊಡುಗೆ ಅಪಾರ. ಆದರೆ ನಾವು ರೈತರಾಗಿದ್ದರೂ ಸಂಘಟಿತರಾಗದ ಹಿನ್ನಲೆಯಲ್ಲಿ ಸರಕಾರದಿಂದ ನಿರ್ಲಕ್ಷಿತರಾಗಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಪೊನ್ನಪ್ಪ ಸ್ವಾಗತಿಸಿ, ಚಂದ್ರಶೇಖರ್ ನಿರೂಪಿಸಿ ವಂದಿಸಿದರು. ವೇದಿಕೆಯಲ್ಲಿ ರೈತ ಸಂಘದ ಪ್ರಮುಖರಾದ ಪೊನ್ನಂಪೇಟೆಯ ಮಂಜುನಾಥ್, ಅಜ್ಜಮಾಡ ಚಂಗಪ್ಪ, ಸಿದ್ದಾಪುರದ ಪೂಣ್ಣಚ್ಚ ಹಿರಿಯ ಸಹಕಾರಿ ಮುಖಂಡ ಎಂ.ಎA.ಕೊಮಾರಪ್ಪ, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಸ್.ಮಂಜುನಾಥ್ ಹೋಬಳಿ ವ್ಯಾಪ್ತಿಯ ಕೃಷಿಕರು ಉಪಸ್ಥಿತರಿದ್ದರು.