ಸುಂಟಿಕೊಪ್ಪ, ನ. ೧೮: ವಿದ್ಯೆಯಿಂದ ಪ್ರಬುದ್ಧರಾಗಿರಿ ಸಂಘಟನೆಯಿAದ ಶಕ್ತರಾಗಿರಿ ಎಂಬ ಶ್ರೀ ನಾರಾಯಣ ಗುರುಗಳ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.
ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ ೧೭ನೇ ವರ್ಷದ ಓಣಂ ಆಚರಣೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಮಂತರ್ ಗೌಡ, ನಾರಾಯಣ ಗುರು ಜೀವನ ಇಂದಿಗೂ ಎಲ್ಲಾ ವರ್ಗಕ್ಕೂ ಆದರ್ಶ ಪ್ರಾಯವಾಗಿದ್ದು, ಅವರ ಸಿದ್ಧಾಂತ, ಗುರಿಯನ್ನು ಅರಿತು ಮುನ್ನಡೆದರೆ ಸದೃಢ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದರು.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಪನ್ಯ ಪ್ರಕರಣವು ಒಂದು ವಿಶೇಷ ಮತ್ತು ಅಪರೂಪದ ಪ್ರಕರಣಗಳಲ್ಲಿ ಒಂದಾಗಿದ್ದು, ತಮ್ಮ ಸೇವಾವಧಿಯಲ್ಲಿ ಅತ್ಯಂತ ಸವಾಲಿನ ತನಿಖೆ ಇದಾಗಿತ್ತು. ಮೇಲಾಧಿಕಾರಿ, ಸಹದ್ಯೋಗಿಗಳ ಬೆಂಬಲ ಮಾರ್ಗದರ್ಶನದಿಂದ ತಂಡದ ಸ್ಫೂರ್ತಿಯಿಂದ ಪ್ರಕರಣವನ್ನು ಬೇಧಿಸಲು ಸಾಧ್ಯವಾಯಿತು. ಯಾರು ಕೂಡ ಕಾನೂನಿನ ಮುಂದೆ ದೊಡ್ಡವರಾಗುವ ಪ್ರಯತ್ನ ಕಾನೂನನ್ನು ಉಲ್ಲಂಘಿಸಿ ಜೀವನ ಮಾಡಬಹುದು ಎಂಬ ಚಿಂತನೆಗಳಿದ್ದರೇ ಈ ಪ್ರಕರಣವನ್ನು ಅವಲೋಕಿಸಿ ಅಂತಹ ಋಣಾತ್ಮಕ ಚಿಂತನೆಗಳಿAದ ಹೊರ ಬರಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿ, ನಾವೆಲ್ಲಾರೂ ಪರಸ್ಪರ ಸಹೋದರತೆಯಿಂದ ಸಾಮರಸ್ಯದಿಂದ ಬಾಳಬೇಕು. ಈ ರೀತಿಯ ಕಾರ್ಯಕ್ರಮಗಳು ಆಯೋಜಿಸುವ ಸಂದರ್ಭ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಮಡಿಕೇರಿ ಹಿಂದೂ ಮಲಯಾಳಿ ಸಮಾಜದ ಸ್ಥಾಪಕಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ ಸಮಾಜ ಬಾಂಧವರು ತಮ್ಮ ಮಕ್ಕಳ ಉನ್ನತ ಶಿಕ್ಷಣದತ್ತ ಹೆಚ್ಚು ಗಮನಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ. ಈ ಬಗ್ಗೆ ಪೋಷಕರು ಎಚ್ಚೆತ್ತು ಮಕ್ಕಳ ಬಗ್ಗೆ ಮುತುವರ್ಜಿ ವಹಿಸುವಂತೆ ಕರೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್, ಮಡಿಕೇರಿ ತಾಲೂಕಿನ ಖಜಾಂಜಿ ದಿನೇಶ್, ಮಡಿಕೇರಿ ಎಸ್.ಎನ್.ಡಿ.ಪಿ. ಅಧ್ಯಕ್ಷ ವಾಸುದೇವನ್, ಪ್ರಕಾಶ್, ಸುಂಟಿಕೊಪ್ಪ ಮಲಯಾಳಿ ಸಮಾಜದ ಸ್ಥಾಪಕಾಧ್ಯಕ್ಷ ಪಿ.ಆರ್. ಸುಕುಮಾರ್, ಪಿ.ಸಿ. ಮೋಹನ್, ವಿ.ಎ. ಸಂತೋಷ್ ಮಾತನಾಡಿದರು.
ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಎಂ.ಆರ್. ಶಶಿಕುಮಾರ್ ವಹಿಸಿದ್ದರು.
ಇದೇ ವೇಳೆ ಓಣಂ ಆಚರಣೆಯ ಪ್ರಮುಖ ಭಾಗವಾದ ಪೂಕಳಂ ಸ್ಪರ್ಧೆ ನಾರಾಯಣ ಗುರು ಭವನದಲ್ಲಿ ನಡೆಯಿತು.
ನಂತರ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ ನಂತರ ಮಲಯಾಳಿ ಜನಾಂಗದ ಸಾಂಪ್ರಾದಾಯಿಕ ಉಡುಗೆ ತೊಟ್ಟು ಕೇರಳದ ಚಂಡೆ ವಾದ್ಯದೊಂದಿಗೆ, ಮಾವೇಲಿ ವೇಷಾಧಾರಿಯೊಂದಿಗೆ, ನಾರಾಯಣ ಗುರುಗಳ ಭಾವಚಿತ್ರವನ್ನು ಇರಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಪ್ರಶಾಂತ್, ಶಿವಪ್ರಸಾದ್ ಹಾಗೂ ಸುಂಟಿಕೊಪ್ಪ ಪನ್ಯ ತೋಟದಲ್ಲಿ ಅಂತರ ರಾಜ್ಯದಲ್ಲಿ ಕೊಲೆಗೈದು ಮೃತದೇಹದ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರುವ ಪ್ರಕರಣವನ್ನು ಬೇಧಿಸಿದ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಪ್ರವೀಣ್ ಹಾಗೂ ಮಹಿಳಾ ಪೇದೆ ಆಶಾ ಅವರುಗಳನ್ನು ಸನ್ಮಾನಿಸಲಾಯಿತು.
ಮಧ್ಯಾಹ್ನದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.