ಮಡಿಕೇರಿ, ನ. ೧೯: ದಾಸಶ್ರೇಷ್ಠ, ಸಂತಕವಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಅಸಮಾನತೆ, ಕಂದಾಚಾರ ಹಾಗೂ ಮೌಢ್ಯವನ್ನು ಕೀರ್ತನೆಗಳ ಮೂಲಕ ಹೋಗಲಾಡಿ ಸಲು ಕನಕದಾಸರು ಶ್ರಮಿಸಿದ್ದಾರೆ. ಕನಕದಾಸರ ಕೀರ್ತನೆಗಳು ಸಾರ್ವಕಾ ಲಿಕವಾಗಿದ್ದು, ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಕನಕದಾಸರ ಕೀರ್ತನೆಗಳು ಮತ್ತು ಮಾರ್ಗ ದರ್ಶನವನ್ನು ಅಳವಡಿಸಿಕೊಳ್ಳು ವಂತಾಗಬೇಕು.

ಕನಕದಾಸರು ಸಮಾಜದಲ್ಲಿರುವ ತಾರತಮ್ಯ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ಎಲ್ಲರೂ ಸಮಾನವಾಗಿ ಬದುಕಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ ಎಂದು ನುಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕನಕದಾಸರ ಪ್ರಸಿದ್ಧ ಕೀರ್ತನೆಯಾದ ಕುಲ-ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲವನ್ನೇನಾದರೂ ಬಲ್ಲಿರಾ, ಇದು ಇಂದಿಗೂ ಪ್ರಸ್ತುತವಾದ ಮಾತಾಗಿದೆ.

ಕನಕದಾಸರ ಕೀರ್ತನೆಯಲ್ಲಿರುವ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಸಾಹಿತಿ ಉ.ರಾ. ನಾಗೇಶ್ ಮಾತನಾಡಿ, ಕನಕದಾಸರು ದಾಸ ಶ್ರೇಷ್ಠರಲ್ಲಿ ಒಬ್ಬರು. ಸಮಾಜದಲ್ಲಿರುವ ಅಂಕು-ಡೊAಕು, ತಾರತಮ್ಯವನ್ನು ಖಂಡಿಸಿ, ತಮಗಿದ್ದ ಸಿರಿತನದ ವೈಭವವನ್ನು ತ್ಯಜಿಸಿ ಜನರ ಕಷ್ಟಕ್ಕೆ ಸ್ಪಂದಿಸಲು ಮುಂದಾದರು.

ಸುಮಾರು ೩೦೦ ಹೆಚ್ಚು ಕೀರ್ತನೆಗಳನ್ನು ರಚಿಸಿರುವ ಕನಕದಾಸರು ತಮ್ಮಲ್ಲಿರುವ ಶ್ರದ್ದೆ, ಭಕ್ತಿಯಿಂದ ಶ್ರೀ ಕೃಷ್ಣನ ದರ್ಶನವನ್ನು ಪಡೆದರು. ಇದಕ್ಕೆ ಸಾಕ್ಷಿ ಉಡುಪಿಯಲ್ಲಿರುವ ಕನಕನ ಕಿಂಡಿಯನ್ನು ಕಾಣಬಹುದಾಗಿದೆ. ಇದರಿಂದ ಕನಕದಾಸರ ಸಾಧನೆ, ಶಕ್ತಿಯು ತಿಳಿಯುತ್ತದೆ ಎಂದು ಹೇಳಿದರು.

ಯಾವುದೇ ವ್ಯಕ್ತಿಗೆ ಶಕ್ತಿ ಬರಬೇಕೆಂದರೆ ಸಾಧನೆ ಮುಖ್ಯವಾಗುತ್ತದೆ. ಸಾಧನೆ ಮಾಡಲು ಪರಿಶ್ರಮ ಮುಖ್ಯ. ತಮ್ಮನ್ನು ತಾವು ನಂಬಿ ಇತರರಿಗೆ ಕೇಡನ್ನು ಬಯಸದೆ ಉತ್ತಮ ದಾರಿಯಲ್ಲಿ ತನ್ನ ಸಾಧನೆಯ ದಾರಿಯಲ್ಲಿ ನಡೆದರೆ ಪ್ರತಿಫಲ ದೊರೆಯುತ್ತದೆ ಎಂದು ಪ್ರತಿಪಾದಿಸಿದರು.

ಸಂತರು ಲೋಕದ ಜನರ ಬಾಳು, ಬದುಕು, ಶಾಂತಿ, ನೆಮ್ಮದಿ ನೆಲೆಸಲೆಂದು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದಂತವರು. ಆ ದಿಸೆಯಲ್ಲಿ ಕನಕದಾಸರು ಶ್ರೇಷ್ಠ ಸಂತರ ಸಾಲಿನಲ್ಲಿ ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದರು.

ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಗಂಗಾಧರ ಮಾತನಾಡಿ, ದಾಸ ಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ತಮ್ಮ ಕೀರ್ತನೆಗಳ ಮೂಲಕ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಾನಪದ ಪರಿಷತ್ತು ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಅನಿಲ್ ಎಚ್.ಟಿ., ನಗರಸಭೆ ಪೌರಾಯುಕ್ತ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಇತರರು ಇದ್ದರು.