ಅನಿಲ್ ಎಚ್.ಟಿ.
ಮಡಿಕೇರಿ, ನ. ೧೯: ಪ್ರಾಕೃತಿಕ ವಿಕೋಪ ಸಂದರ್ಭದ ಫಸಲು ಹಾನಿ ವಿಮಾ ವ್ಯಾಪ್ತಿಗೆ ಕಾಫಿ ಫಸಲನ್ನೂ ತರುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಪೂರಕ ಸ್ಪಂದನ ದೊರಕುವ ನಿರೀಕ್ಷೆಯಿದೆ ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ದಿನೇಶ್, ಕಾಫಿ ಬೆಳೆಗಾರರ ಅನೇಕ ವರ್ಷಗಳ ಬೇಡಿಕೆಯಾಗಿರುವ ಕಾಫಿ ಫಸಲು ನಷ್ಟಕ್ಕೆ ವಿಮೆಯ ಸೌಲಭ್ಯದ ಪ್ರಸ್ತಾವನೆಯನ್ನು ಕೇಂದ್ರ ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಪಂದಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಒಳ್ಳೆಯ ಸುದ್ದಿಯನ್ನು ಬೆಳೆಗಾರರಿಗೆ ನೀಡುವ ನಿರೀಕ್ಷೆ ನಮ್ಮದಾಗಿದೆ ಎಂದರು.
ಪ್ರಸ್ತುತ ಭಾರತದಲ್ಲಿ ೩,೬೦ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಾಫಿಯನ್ನು ಉತ್ಪಾದಿಸಲಾಗುತ್ತಿದೆ. ಈ ಪ್ರಮಾಣವನ್ನು ೧೦ ವರ್ಷಗಳಲ್ಲಿ ೬ ಲಕ್ಷ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸುವ ಗುರಿಯನ್ನೂ ಕಾಫಿ ಮಂಡಳಿಯು ಹೊಂದಿದೆ ಎಂದೂ ದಿನೇಶ್ ಮಾಹಿತಿ ನೀಡಿದರು.
ಚೆಟ್ಟಳ್ಳಿಯಲ್ಲಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ಈಗಾಗಲೇ ಕಾಫಿ ಮಾಡೆಲ್ ಬ್ಲಾಕ್‌ಗೆ ಚಾಲನೆ ನೀಡಲಾಗಿದ್ದು, ಕಾಫಿಯ ಹೊಸ ತಳಿಗಳ ಆವಿಷ್ಕಾರದೊಂದಿಗೆ ಕಾಫಿ ಕೃಷಿಯಲ್ಲಿ ಏನೆಲ್ಲಾ ಹೊಸ ಸಂಶೋಧನೆ ಸಾಧ್ಯ ಎಂಬುದನ್ನು ಈ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಪತ್ತೆಹಚ್ಚುವ ಕೆಲಸ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುತ್ತದೆ ಎಂದು ದಿನೇಶ್ ಮಾಹಿತಿ ನೀಡಿದರು.
ಕಾಫಿ ಬೆಳೆಗಾರರು ಖಂಡಿತವಾಗಿಯೂ ಭವಿಷ್ಯದ ಬಗ್ಗೆ ಆಶಾಭಾವನೆ ಇಟ್ಟುಕೊಳ್ಳಬಹುದಾಗಿದೆ. ಆದರೆ ಕಾರ್ಮಿಕರ ಕೊರತೆ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹಿನ್ನಲೆಯಲ್ಲಿ ಕಾಫಿ ತೋಟಗಳಲ್ಲಿ ಯಾಂತ್ರೀಕರಣಕ್ಕೆ ಆದ್ಯತೆ ನೀಡಲು ಈಗಲೇ ಸೂಕ್ತ ಕ್ರಮಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ದಿನೇಶ್ ಕಿವಿಮಾತು ಹೇಳಿದರು.
ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ (ಕೆ.ಪಿ.ಎ.)
ಕರ್ನಾಟಕ ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್‌ನ ೬೬ನೇ ವಾರ್ಷಿಕ ಸಮ್ಮೇಳನದ ಎರಡನೇ ದಿನದ ವಿಚಾರಗೋಷ್ಠಿಗೆ ಚಾಲನೆ ನೀಡಿ ಸಭಾ ವೇದಿಕೆಯಲ್ಲಿ ಮಾತನಾಡಿದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಶೀಘ್ರದಲ್ಲಿಯೇ ಕಾಫಿ ಕಿಯೋಸ್ಕ್ ಮೂಲಕ ಮಹಿಳಾ ಕಾಫಿ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ದೇಶವ್ಯಾಪಿ ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ಮಹತ್ವದ ಯೋಜನೆಯನ್ನು
(ಮೊದಲ ಪುಟದಿಂದ) ಕಾಫಿ ಮಂಡಳಿಯು ಜಾರಿಗೆ ತರಲಿದೆ. ಗುಣಮಟ್ಟದ ಕಾಫಿ ಉತ್ಪಾದನೆಯೊಂದಿಗೆ ಸ್ವಾದಿಷ್ಟ ಕಾಫಿಯನ್ನೂ ಭಾರತೀಯ ಕಾಫಿಯ ಬ್ರಾಂಡ್ ಮಾಡುವ ನಿಟ್ಟಿನಲ್ಲಿ ಮಂಡಳಿಯಿAದ ಅನೇಕ ಯೋಜನೆಗಳು ಮುಂದಿನ ವರ್ಷದಲ್ಲಿ ಜಾರಿಯಾಗಲಿದೆ ಎಂದು ಹೇಳಿದರು.
ಆಂತರಿಕ ಕಾಫಿ ಬಳಕೆಯಾಗಬೇಕು
ವಿಶ್ವದಲ್ಲಿ ವ್ಯಕ್ತಿಯೋರ್ವ ವಾರ್ಷಿಕವಾಗಿ ಸರಾಸರಿ ಲೆಕ್ಕದಲ್ಲಿ ೨೦೦ ಕಪ್ ಕಾಫಿ ಸೇವಿಸಿದರೆ ಭಾರತದಲ್ಲಿ ಈ ಪ್ರಮಾಣ ವಾರ್ಷಿಕವಾಗಿ ೨೩ ಕಪ್‌ಗಳಷ್ಟು ಮಾತ್ರ ಇದೆ. ಆಂತರಿಕವಾಗಿ ಕಾಫಿ ಬಳಕೆಯನ್ನು ಉತ್ತೇಜಿಸಿದರೆ ಖಂಡಿತವಾಗಿಯೂ ಹಾಲಿ ಉತ್ಪಾದನೆಯಾದ ೩ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಾಫಿ ಭಾರತದಲ್ಲಿಯೇ ಬಳಕೆಯಾಗುತ್ತದೆ ಎಂದೂ ದಿನೇಶ್ ಅಭಿಪ್ರಾಯಪಟ್ಟರು. ಅಂತೆಯೇ ಭಾರತದ ಕಾಫಿ ತೋಟದಲ್ಲಿ ಹೆಕ್ಟೇರ್‌ಗೆ ೧೩೪೩ ಕೆ.ಜಿ. ಕಾಫಿ ಉತ್ಪಾದನೆ ಮಾಡುವ ನಿಟ್ಟಿನಲ್ಲಿಯೂ ಮಂಡಳಿಯಿAದ ಕಾರ್ಯಯೋಜನೆ ಜಾರಿಯಲ್ಲಿದೆ ಎಂದು ತಿಳಿಸಿದ ದಿನೇಶ್, ಕಾಫಿ ರಫ್ತಿನಲ್ಲಿ ೫ನೇ ಸ್ಥಾನದಲ್ಲಿರುವ ಭಾರತದ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ೭ನೇ ಸ್ಥಾನ ಹೊಂದಿದೆ. ಇದನ್ನು ೫ನೇ ಸ್ಥಾನಕ್ಕೆ ತರುವ ನಿಟ್ಟಿನಲ್ಲಿಯೂ ಮಂಡಳಿಯಿAದ ಯತ್ನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಕಾಫಿ ಕೃಷಿಯ ಸಂಶೋಧನೆ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಈಗ ಲಭ್ಯವಿರುವ ೧೦ ಕೋಟಿ ರೂಪಾಯಿಯನ್ನು ೫೦ ಕೋಟಿ ರೂಪಾಯಿಗೆ ಹೆಚ್ಚಿಸುವ ಬೇಡಿಕೆಯನ್ನೂ ವಾಣಿಜ್ಯ ಸಚಿವಾಲಯದ ಮಂದೆ ಇರಿಸಲಾಗಿದೆ. ಮಂಡಳಿಗೆ ಹೆಚ್ಚುವರಿ ಅನುದಾನ ಲಭಿಸಿದ್ದೇ ಆದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಕೇಂದ್ರಗಳ ತಜ್ಞರ ನೆರವಿನಿಂದ ಸಾಕಷ್ಟು ಸಂಶೋಧನೆ ಕೈಗೊಂಡು ಭಾರತೀಯ ಕಾಫಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲು ಸಾಧ್ಯವಿದೆ ಎಂದು ದಿನೇಶ್ ಅಭಿಪ್ರಾಯಪಟ್ಟರು.
ಕಾಫಿ ಮಂಡಳಿ ವತಿಯಿಂದ ತೋಟಗಳ ನಿರ್ವಹಣೆಗಾಗಿ ಇ-ಸೂಪರ್‌ವೈಸರ್ ಹೆಸರಿನ ವ್ಯವಸ್ಥಾಪಕರಿಗಾಗಿ ತರಬೇತಿ ಯೋಜನೆ ಶೀಘ್ರದಲ್ಲಿಯೇ ಜಾರಿಯಾಗಲಿದ್ದು ಈ ಮೂಲಕ ತೋಟಗಳಿಗೆ ಅತ್ಯಗತ್ಯವಾದ ಸೂಪರ್ ವೈಸರ್‌ಗಳು ದೊರಕಿದಂತಾಗಲಿದೆ ಎಂದೂ ಅವರು ಹೇಳಿದರು.
ಯುರೋಪಿಯನ್ ದೇಶಗಳಿಗೆ ಕಾಫಿ ಮಾರಾಟ ಮಾಡಲು ಆ ದೇಶಗಳು ಈಗಾಗಲೇ ಜಾರಿಗೆ ತಂದಿರುವ ಹೊಸ ಕಾಯಿದೆ ಬಗ್ಗೆ ಆತಂಕ ಬೇಡ ಎಂದು ಹೇಳಿದ ದಿನೇಶ್, ಕಾಫಿ ಕೃಷಿಯಿರುವ ಪ್ರದೇಶಗಳಲ್ಲಿ ಮರಗಳ ಹನನವಾಗಿರಬಾರದು. ಹಸಿರು ನಾಶದ ಸುಳಿವು ದೊರಕಿದರೆ ಅಂತಹ ಕಾಫಿಯನ್ನು ತಿರಸ್ಕರಿಸಲಾಗುತ್ತದೆ ಎಂಬ ಹೊಸ ನಿಯಮವನ್ನು ಅನೇಕ ದೇಶಗಳು ಸ್ವಾಗತಿಸಿ ಈಗಾಗಲೇ ಜಾರಿಗೆ ತಂದಿದೆ. ಭಾರತ ಇನ್ನೂ ಈ ನಿಯಮದ ಬಗ್ಗೆ ಪರಿಶೀಲನೆ ಕೈಗೊಳ್ಳುತ್ತಿದೆ. ಕಾಯಿದೆ ಜಾರಿಯ ಸಾಧ್ಯಸಾಧ್ಯತೆ ಬಗ್ಗೆ ಮತ್ತಷ್ಟು ವಿವರವಾಗಿ ಪರಿಶೀಲಿಸಲಾಗುತ್ತದೆ. ಆದರೂ ಮುಂದೊAದು ದಿನ ವಿಶ್ವದ ಎಲ್ಲಾ ದೇಶಗಳಂತೆ ಭಾರತ ಕೂಡ ಈ ಪರಿಸರ ಸ್ನೇಹಿ ಕಾಯಿದೆಗೆ ಸಮ್ಮತಿ ನೀಡಲೇಬೇಕಾಗುತ್ತದೆ ಎಂದು ದಿನೇಶ್ ಅನಿಸಿಕೆ ವ್ಯಕ್ತಪಡಿಸಿದರು.
ದಕ್ಷಿಣ ಭಾರತೀಯ ಬೆಳೆಗಾರರ ಒಕ್ಕೂಟದ (ಉಪಾಸಿ) ಅಧ್ಯಕ್ಷ ಮ್ಯಾಥ್ಯು ಅಬ್ರಾಹಂ ಮಾತನಾಡಿ, ಭವಿಷ್ಯದ ದಿನಗಳಲ್ಲಿ ಪ್ರಕೃತ್ತಿಯು ಈ ಹಿಂದಿದ್ದAತೆ ಖಂಡಿತಾ ಇರಲಾರದು, ಪ್ರಾಕೃತಿಕ ವಿಕೋಪಗಳು, ಅತಿವೃಷ್ಟಿ, ಅನಾವೃಷ್ಟಿಯ ಸ್ಥಿತಿ ಅಕಾಲಿಕವಾಗಿ ಬಂದೆರಗುವ ಎಲ್ಲಾ ಸಾಧ್ಯತೆಗಳಿದೆ, ಇದನ್ನು ಗಮನಿಸಿಕೊಂಡೇ ಕೃಷಿಕರು ಕಾಫಿ, ಕರಿಮೆಣಸು, ಟೀ, ರಬ್ಬರ್ ಮುಂತಾದ ಕೃಷಿಗೆ ಮುಂದಾಗಬೇಕು, ಪ್ರಾಕೃತಿಕ ವಿಕೋಪವನ್ನು ಮುಂದಿನ ದಿನಗಳಲ್ಲಿ ಊಹಿಸಲೇ ಆಗಲಿಲ್ಲ ಎಂದು ಹೇಳುವಂತಿಲ್ಲ. ಇಂತಹ ಅಕಾಲಿಕ ವಿಕೋಪಗಳು ಆಗಿಂದಾಗ್ಗೆ ಬರುವ ಮೂಲಕ ಕೃಷಿಕರಿಗೆ ಸವಾಲಾಗಲಿದೆ ಎಂದು ಎಚ್ಚರಿಸಿದರು.
ಕಳೆದ ಆರ್ಥಿಕ ಸಾಲಿನಲ್ಲಿ ಭಾರತದ ಕಾಫಿಯು ೧೦,೧೮೧ ಕೋಟಿ ರೂಪಾಯಿ ರಫ್ತು ಮೌಲ್ಯವನ್ನು ಹೊಂದಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಯಾವುದೇ ಹಿಡಿತ ಇನ್ನೂ ದೊರಕಿಲ್ಲ ಎಂದು ಮ್ಯಾಥ್ಯು ವಿಷಾದಿಸಿದರು.
ದಕ್ಷಿಣ ಭಾರತದಾದ್ಯಂತ ಕೃಷಿ ಭೂಮಿಗಳಲ್ಲಿ ಹೆಚ್ಚುತ್ತಲೇ ಇರುವ ಮಾನವ - ವನ್ಯಜೀವಿ ಸಂಘರ್ಷದ ಕುರಿತಂತೆ ಉಪಾಸಿಯು ಎಲ್ಲಾ ರೀತಿಯಲ್ಲಿಯೂ ಮಾಹಿತಿ ಪಡೆಯುತ್ತಿದೆ. ಇದಕ್ಕೆ ಪರಿಹಾರದ ನಿಟ್ಟಿನಲ್ಲಿ ಪರಿಣಿತರೊಂದಿಗೆ ಹಲವಾರು ಸಭೆಗಳನ್ನೂ ನಡೆಸಲಾಗಿದೆ. ಶೀಘ್ರದಲ್ಲಿ ಸಂಘರ್ಷ ತಡೆ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಯೋಜನೆ ಜಾರಿಗೆ ಉಪಾಸಿ ಕ್ರೀಯಾಯೋಜನೆ ಸಿದ್ಧಗೊಳಿಸಲಿದೆ ಎಂದೂ ಅವರು ಭರವಸೆಯ ನುಡಿಯಾಡಿದರು. ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಳ್ಳಿಚಂಡ ರಾಜೀವ್ ಗಣಪತಿ ಮಾತನಾಡಿ, ಅತ್ಯಂತ ಫಲಪ್ರದವಾಗಿ ಕೊಡಗಿನಲ್ಲಿ ೬೬ನೇ ವಾರ್ಷಿಕ ಸಮ್ಮೇಳನ ಯಶಸ್ವಿಯಾಗಿ ಆಯೋಜನೆಗೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ವ್ಯಕ್ತವಾದ ತಜ್ಞರ ಅಭಿಪ್ರಾಯಗಳಿಂದ ಕಾಫಿ, ಕರಿಮೆಣಸು ಸೇರಿದಂತೆ ವಿವಿಧ ಕೃಷಿ ಬೆಳೆಗಾರರಿಗೆ ಉಪಯೋಗವಾಗುತ್ತದೆ ಎಂಬ ನಂಬಿಕೆಯನ್ನೂ ರಾಜೀವ್ ವ್ಯಕ್ತಪಡಿಸಿದರು.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ, ಮುಂದಿನ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಎ. ಅರವಿಂದ್ ರಾವ್, ಉಪಾಸಿಯ ಉಪಾಧ್ಯಕ್ಷ ಅಜಯ್ ತಿಮ್ಮಯ್ಯ, ಕಾರ್ಯದರ್ಶಿ ಆರ್. ಸಂಜಿತ್ ವೇದಿಕೆಯಲ್ಲಿದ್ದರು. ಕೊಡಗಿನ ವಿವಿಧೆಡೆÀಗಳಿಂದ ನೂರಾರು ಕೃಷಿಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಭಾರತದ ಹಲವೆಡೆಗಳಿಂದಲ್ಲದೇ ಪಂಜಾಬ್‌ನಿAದ ಮಾತ್ರವಲ್ಲದೇ ವಿದೇಶಗಳಿಂದ ಕೃಷಿ ತಜ್ಞರು ಮಡಿಕೇರಿಯ ಹೊರವಲಯದಲ್ಲಿನ ಈ ಸಮ್ಮೇಳನದಲ್ಲಿ ಪಾಲ್ಗೊಂಡು ಮಾಹಿತಿ ವಿನಿಮಯ ಮಾಡಿಕೊಂಡರು. ಕೊಡಗಿನ ಹಿರಿಯ ಕಾಫಿ ಬೆಳೆಗಾರರಾದ ಕೆ.ಪಿ. ಉತ್ತಪ್ಪ, ಬೋಸ್ ಮಂದಣ್ಣ, ವಿನೋದ್ ಶಿವಪ್ಪ, ಕೃಷಿ ತಜ್ಞ ಸಿ.ಜಿ. ಕುಶಾಲಪ್ಪ, ಡಾ. ಚಂಗಪ್ಪ, ಪ್ರಮುಖರಾದ ನಂದಾಬೆಳ್ಯಪ್ಪ, ಕೆ.ಕೆ. ವಿಶ್ವನಾಥ್, ಮಣವಟ್ಟಿರ ಬೋಪಣ್ಣ, ಪ್ರಮೋದ್ ಸೇರಿದಂತೆ ಅನೇಕರು ಗೋಷ್ಠಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾಫಿ ಮತ್ತಿತರ ಕೃಷಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.