ಸಿದ್ದಾಪುರ, ನ. ೧೯: ಚೆನ್ನಂಗಿ ಅಬ್ಬೂರು ವ್ಯಾಪ್ತಿಯ ವನ್ಯಜೀವಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಭರದಿಂದ ಸಾಗುತ್ತಿದೆ.

ತಿತಿಮತಿ ಅರಣ್ಯ ವ್ಯಾಪ್ತಿಯ ಬಾಡಗ ಬಾಣಂಗಾಲ ಹುಂಡಿ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಈ ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ. ಅಲ್ಲದೆ ಕಾಡಾನೆಗಳು ಮಾನವನ ಮೇಲೆ ದಾಳಿ ನಡೆಸುತ್ತಿದ್ದು, ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೆನ್ನಂಗಿ ಹುಂಡಿ ವ್ಯಾಪ್ತಿಯ ಸುಮಾರು ೭ ಕಿ.ಮೀ.ಗಳಷ್ಟು ದೂರದವರೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ.

ಚೆನ್ನಂಗಿ ಅಬ್ಬೂರು ಭಾಗದ ಅರಣ್ಯ ಪ್ರದೇಶದ ಸಮೀಪದಿಂದ ಕಾಡಾನೆಗಳ ಗುಂಪು ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಇಲ್ಲೇ ವಾಸಸ್ಥಾನವಾಗಿ ಮಾಡಿಕೊಂಡಿದೆ. ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಮರಿ ಹಾಕಿದ್ದು ಇವುಗಳು ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯದತ್ತ ತೆರಳಲು ಹಿಂದೇಟು ಹಾಕುತ್ತಿವೆ. ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ೫೦ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ಬೇರೆ ಬೇರೆ ಗುಂಪುಗಳಾಗಿ ಸುತ್ತಾಡುತ್ತಿವೆ.