ಗೋಣಿಕೊಪ್ಪಲು, ನ. ೧೯: ರಾಜ್ಯದಲ್ಲಿ ರೈತ ಚಳುವಳಿ ಹುಟ್ಟು ಹಾಕಿದ ಹಿರಿಯ ಹೋರಾಟಗಾರ ದಿ. ಪ್ರೊ. ನಂಜುAಡ ಸ್ವಾಮಿ ಸೇರಿದಂತೆ ಹಲವರು ಕಟ್ಟಿ ಬೆಳೆಸಿದ ರೈತ ಸಂಘವು ಇತ್ತೀಚೆಗೆ ಹಲವು ಬಣಗಳಾಗಿದೆ. ಸದ್ಯದಲ್ಲಿಯೇ ರಾಜ್ಯದಲ್ಲಿ ರೈತ ಚಳುವಳಿಯ ಎಲ್ಲಾ ಬಣಗಳು ಒಂದೇ ವೇದಿಕೆಯಲ್ಲಿ ಸೇರಲಿವೆ. ಆ ಮೂಲಕ ರೈತ ಸಂಘದ ಒಗ್ಗಟ್ಟನ್ನು ಪ್ರದರ್ಶನ ಮಾಡಲಾಗುವುದು ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ, ರೈತ ಚಳುವಳಿಯ ಪ್ರಮುಖ ದಿ. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದಲ್ಲಿ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ಈಗಾಗಲೇ ರಾಜ್ಯದ ೧೫ ರೈತ ಚಳುವಳಿಯ ಮುಖಂಡರು ಒಂದೆಡೆ ಸೇರಿ ಸಭೆ ನಡೆಸಲಾಗಿದೆ. ನಾಯಕರುಗಳಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇದರಿಂದ ೧೯೮೦ರ ದಶಕದಲ್ಲಿ ಇದ್ದಂತಹ ಒಗ್ಗಟ್ಟು ರಾಜ್ಯದಲ್ಲಿ ಮೂಡಲಿದೆ. ಈ ನಿಟ್ಟಿನಲ್ಲಿ ಕೊಡಗಿನಲ್ಲಿಯೂ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯನವರ ಮುಂದಾಳತ್ವದ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಲು ರಾಜ್ಯ ರೈತ ಸಂಘ ನಿರ್ಧಾರ ಕೈಗೊಳ್ಳಲಿದೆ.

ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆ, ಆನೆ-ಮಾನವ ಸಂಘರ್ಷ ಬಗ್ಗೆ

(ಮೊದಲ ಪುಟದಿಂದ) ಸರ್ಕಾರದ ಗಮನ ಸೆಳೆಯುವ ಮೂಲಕ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಧ್ವನಿ ಎತ್ತಲಾಗುವುದು ಎಂದರು.

ದಿ. ಪ್ರೊ. ನಂಜುAಡ ಸ್ವಾಮಿ ಅವರ ಪುತ್ರ ಪಚ್ಚೆ ನಂಜುAಡ ಸ್ವಾಮಿ ಮುಖ್ಯ ಅತಿಥಿಯಾಗಿ ಆಗಮಿಸಿ, ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ರೈತ ಚಳವಳಿ ಆರಂಭವಾದ ದಿನದಿಂದಲೂ ರಾಜ್ಯದ ನಾಯಕರುಗಳೊಂದಿಗೆ ಉತ್ತಮ ಒಡನಾಟವನ್ನು ಕೊಡಗು ಜಿಲ್ಲಾ ರೈತ ಸಂಘ ಇಟ್ಟುಕೊಂಡಿದೆ. ಹಲವು ಹೋರಾಟಗಳಲ್ಲಿ ರೈತರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನದಲ್ಲಿ ಕಾಡ್ಯಮಾಡ ಮನುಸೋಮಯ್ಯ ಅವರಿಗೆ ರಾಜ್ಯ ಸಮಿತಿಯಲ್ಲಿ ದೊಡ್ಡ ಹುದ್ದೆಯನ್ನು ನೀಡಲಾಗುವುದು. ಮುಂದೆಯೂ ಜಿಲ್ಲೆಯ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟವನ್ನು ಕೈಗೆತ್ತಿಕೊಳ್ಳಬೇಕು. ರೈತರ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ, ರೈತ ಸಂಘದ ಸದಸ್ಯರ ಒಗ್ಗಟ್ಟಿನ ಫಲದಿಂದ ಅನೇಕ ಸಮಸ್ಯೆಗಳು ಪರಿಹಾರ ಕಂಡಿವೆ. ಕಂದಾಯ ಇಲಾಖೆಯಲ್ಲಿ ಆರ್‌ಟಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗಿದೆ. ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಮಡಿಕೇರಿಯಲ್ಲಿ ಬೃಹತ್ ಪ್ರಮಾಣದ ಹೋರಾಟವನ್ನು ಕೈಗೆತ್ತಿಕೊಳ್ಳುವ ಮೂಲಕ ಸಿಎನ್‌ಡಿ ಜಮೀನು ವಿಚಾರದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಲು ಆಗ್ರಹಿಸುತ್ತೇವೆ. ೫ ಸಾವಿರಕ್ಕೂ ಅಧಿಕ ಮಂದಿ ಈ ಹೋರಾಟದಲ್ಲಿ ಭಾಗವಹಿಸುವ ಮೂಲಕ ಮಡಿಕೇರಿ ನಗರದಲ್ಲಿ ರಸ್ತೆತಡೆ ನಡೆಸಲಾಗುತ್ತದೆ ಎಂದರು.

ಕ್ಷೇತ್ರದ ಶಾಸಕರು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಡಿಸೆಂಬರ್‌ನಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಭೆಗೆ ಆಹ್ವಾನಿಸಲಾಗುವುದು. ಈ ಸಂದರ್ಭ ರೈತರಿಗೆ ಅನಾವಶ್ಯಕವಾಗಿ ತೊಂದರೆ ನೀಡುವ ಅಧಿಕಾರಿಗಳ ಮೇಲೆ ದೂರು ನೀಡಲಾಗುವುದು.

ದೇವರ ಕಾಡುಗಳನ್ನು ರುದ್ರ ಭೂಮಿಗಾಗಿ ಹಾಗೂ ಹೊರ ರಾಜ್ಯದಿಂದ ಬರುವ ಕಾರ್ಮಿಕರ ನೆಲೆಗಾಗಿ ಬಳಸಲು ಅವಕಾಶ ನೀಡಬಾರದು. ಸಿಎನ್‌ಡಿ ಭೂಮಿಯ ವಿಚಾರದಲ್ಲಿ ಕೇಂದ್ರ ಸರ್ಕಾರದ ಬಹುದೊಡ್ಡ ಪಾತ್ರವಿದ್ದು ಸಂಸದರು ಈ ನಿಟ್ಟಿನಲ್ಲಿ ರೈತರ ಪರವಾಗಿ ಧ್ವನಿ ಎತ್ತಬೇಕು. ಮುಂದಿನ ದಿನದಲ್ಲಿ ಈ ಬಗ್ಗೆ ಕೊಡಗು,ಮೈಸೂರು ಸಂಸದರನ್ನು ರೈತ ಸಂಘದ ಪದಾಧಿಕಾರಿಗಳು ಭೇಟಿ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಲು ಒತ್ತಡ ಹೇರಲಾಗುವುದು ಎಂದರು. ಸಭೆಯಲ್ಲಿ ಪುಚ್ಚಿಮಾಡ ಲಾಲಾ ಭೀಮಯ್ಯ ಸೇರಿದಂತೆ ಸೋಮವಾರಪೇಟೆ ತಾಲೂಕಿನ ಹಲವು ರೈತ ಮುಖಂಡರುಗಳು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು.

ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ವಾರ್ಷಿಕ ವರದಿ ಮಂಡಿಸಿದರು. ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಹೂವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ರೈತ ಸಂಘವು ಜಿಲ್ಲೆಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಲೆಕ್ಕಪತ್ರ ಮಂಡಿಸಿದರು. ಚೆಟ್ರುಮಾಡ ಚಂಗಪ್ಪ ಪ್ರಾರ್ಥಿಸಿ, ತಿತಿಮತಿಯ ರೈತ ಸಂಘದ ಅಧ್ಯಕ್ಷ ಚೆಪ್ಪುಡಿರ ಕಾರ್ಯಪ್ಪ ನಿರೂಪಿಸಿ, ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ವಂದಿಸಿದರು. ಸಭೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಖಜಾಂಚಿ ಇಟ್ಟಿರ ಸಬಿತ ಭೀಮಯ್ಯ, ಹಿರಿಯ ವಕೀಲ ಹೇಮಚಂದ್ರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶಮಾಚಯ್ಯ, ರೈತ ಮುಖಂಡರಾದ ಪುಚ್ಚಿಮಾಡ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಮಿದೇರಿರ ಕವಿತರಾಮ್, ಮಾಯಮುಡಿಯ ಎಸ್.ಎಸ್. ಸುರೇಶ್, ತೀತರಮಾಡ ರಾಜ, ಮಲ್ಚಿರ ಅಶೋಕ್, ಪುಚ್ಚಿಮಾಡ ಸುನಿಲ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಿಂದ ರೈತ ಮುಖಂಡರುಗಳು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. -ಹೆಚ್.ಕೆ. ಜಗದೀಶ್