ಸಿದ್ದಾಪುರ, ನ. ೧೯: ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗಾರರು ಹಾಗೂ ಭತ್ತದ ಕೃಷಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಆಗಿಂದಾಗ್ಗೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಹಣ್ಣಾಗಿರುವ ಕಾಫಿ ಫಸಲುಗಳಿಗೆ ಹಾನಿಯಾಗಿರುತ್ತದೆ.

ಕೆಲವು ಬೆಳೆಗಾರರು ಈಗಾಗಲೇ ಕಾಫಿ ಕೊಯ್ಲು ಮಾಡುತ್ತಿದ್ದು ಇವುಗಳನ್ನು ಒಣಹಾಕಲು ಸಮಸ್ಯೆಯಾಗಿರುತ್ತದೆ. ಸಿದ್ದಾಪುರ ಭಾಗದಲ್ಲಿ ಕಳೆದೆರಡು ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗುವ ಆತಂಕ ಬೆಳೆಗಾರರಲ್ಲಿ ಮನೆ ಮಾಡಿದೆ. ಇದಲ್ಲದೆ ಭತ್ತದ ಫಸಲು ಕಟಾವಿಗೆ ಬಂದಿದ್ದು, ಮಳೆಯಿಂದಾಗಿ ಭತ್ತ ಉದುರುವ ಸಾಧ್ಯತೆ ಕಂಡು ಬಂದಿದೆ. ಕಷ್ಟಪಟ್ಟು ಬೆಳೆದ ಬೆಳೆಗಳು ಇದೀಗ ಮಳೆ ನೀರಿಗೆ ಸಿಲುಕಿ ಹಾನಿಯಾಗುವ ಸಂಭವ ಇದೆ ಎಂದು ಬೆಳಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಆಗಿಂದಾಗ್ಗೆ ಅಕಾಲಿಕ ಮಳೆಯು ಸುರಿಯುತ್ತಿರುವುದರಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ.