ಕುಶಾಲನಗರ, ನ. ೧೯: ಕುಶಾಲನಗರದ ಶ್ರೀ ಗಣಪತಿ ರಥೋತ್ಸವ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.

ಕಾರ್ತಿಕ ಮಾಸ ಕೃಷ್ಣ ಪಕ್ಷದಲ್ಲಿ ನಡೆಯುವ ಗಣಪತಿ ದೇವಾಲಯದ ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ ಪುಷ್ಪಾಲಂಕಾರ ರಥ ಪೂಜೆ, ರಥ ಬಲಿ ನಂತರ ಗಣಪತಿ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಭಕ್ತಾಧಿಗಳು ರಥ ಬೀದಿಯ ಮೂಲಕ ಆಂಜನೇಯ ದೇವಾಲಯದವರೆಗೆ ಘೋಷಣೆ ಗಳೊಂದಿಗೆ ಭಕ್ತಿಭಾವದಿಂದ ಎಳೆದರು.

ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು, ರಾಘವೇಂದ್ರ ಭಟ್ ಮತ್ತು ಅರ್ಚಕರ ತಂಡದಿAದ ಪೂಜಾ ವಿಧಿ ವಿಧಾನಗಳು ಜರುಗಿದವು. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಜಾತ್ರೋತ್ಸವ ಅಂಗವಾಗಿ ದೇವಾಲಯದ ಒಳ ಆವರಣವನ್ನು ವಿಶೇಷವಾಗಿ ಹೂಗಳಿಂದ ಸಿಂಗರಿಸಲಾಗಿತ್ತು.

(ಮೊದಲ ಪುಟದಿಂದ) ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ರಥದ ಮುಂದೆ ಕರ್ಪೂರ ಆರತಿ ಬೆಳಗಿ ಅಯ್ಯಪ್ಪ ಸ್ವಾಮಿ ಘೋಷಣೆ ಕೂಗಿದರು. ಭಕ್ತರು ಈಡುಗಾಯಿ ಹರಕೆ ಒಪ್ಪಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಶ್ರೀ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್, ಗೋ ಜಾತ್ರೆ ಮತ್ತು ಕೃಷಿ ಮೇಳ ಡಿಸೆಂಬರ್ ೭ ರಿಂದ ೩ ದಿನಗಳ ಕಾಲ ನಡೆಯುತ್ತದೆ ಎಂದು ಹೇಳಿದರು.

ಗುಂಡೂರಾವ್ ಜಾತ್ರಾ ಮೈದಾನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ ೧ ರ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರಾ ಮೈದಾನದಲ್ಲಿ ನಡೆಯಲಿವೆ ಎಂದು ಸಾಂಸ್ಕೃತಿಕ ಸಮಿತಿಯ ಸಂಚಾಲಕ ವಿ.ಪಿ. ಶಶಿಧರ್ ತಿಳಿಸಿದರು.

ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ನೂರಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ದೇವಾಲಯ ಸೇವಾ ಸಮಿತಿಯ ಕಾರ್ಯಕಾರಿ ಮಂಡಳಿ ಉಪಾಧ್ಯಕ್ಷ ಆರ್. ಬಾಬು, ಗೌರವಾಧ್ಯಕ್ಷ ವಿ.ಎನ್. ವಸಂತಕುಮಾರ್, ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ಖಜಾಂಚಿ ಎಸ್.ಕೆ. ಸತೀಶ್, ಸಹ ಕಾರ್ಯದರ್ಶಿ ಕೆ.ಎನ್. ದೇವರಾಜ್, ನಿರ್ದೇಶಕರಾದ ವಿ.ಡಿ. ಪಂಡರಿಕಾಕ್ಷ, ಹೆಚ್.ಎಂ. ಚಂದ್ರು, ಟಿ.ಆರ್. ಶರವಣಕುಮಾರ್ ಮತ್ತು ವಿಶೇಷ ಆಹ್ವಾನಿತರಾದ ಹೆಚ್.ಎನ್. ರಾಮಚಂದ್ರ, ಡಿ. ಅಪ್ಪಣ್ಣ, ವೈ.ಆರ್. ನಾಗೇಂದ್ರ, ಡಿ.ಸಿ. ಜಗದೀಶ್, ಕೆ.ಎನ್. ಸುರೇಶ್, ಕೆ.ಸಿ. ನಂಜುAಡಸ್ವಾಮಿ, ಎಂ. ಮುನಿಸ್ವಾಮಿ, ವಿ.ಎಸ್. ಆನಂದಕುಮಾರ್, ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ್ ರಾವ್ ಇದ್ದರು. ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಪಾರ್ಕ್ಗೆ ಚಾಲನೆ

ಕುಶಾಲನಗರ ಮಹಾಗಣಪತಿ ದೇವಸ್ಥಾನ ರಥೋತ್ಸವ ಅಂಗವಾಗಿ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಆಯೋಜಿಸಿರುವ ಅಮ್ಯೂಸ್ಮೆಂಟ್ ಪಾರ್ಕ್ಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

೨೦ ದಿನಗಳ ಕಾಲ ಮನರಂಜನಾ ಕಾರ್ಯಕ್ರಮಗಳನ್ನು ಒಳಗೊಂಡು ನಡೆಯುವ ಜಾತ್ರೆಗೆ ಚಾಲನೆ ನೀಡಿದ ಮಂತರ್ ಗೌಡ ಜಾತ್ರೆಗೆ ಆಗಮಿಸುವ ಜನರ, ಗ್ರಾಹಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಯಮಗಳನ್ನು ಪಾಲಿಸಬೇಕೆಂದರು.

ಇದೇ ಸಂದರ್ಭ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಮುಂದಿನ ಒಂದು ವಾರ ತನಕ ದಿನನಿತ್ಯ ದೇವತಾ ಕಾರ್ಯಗಳು ನಡೆಯಲಿವೆ ಎಂದರು.

ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಸಮಿತಿಯ ಸಂಚಾಲಕ ವಿ ಪಿ ಶಶಿಧರ್ ಮಾತನಾಡಿ ಜಾತ್ರಾ ಮೈದಾನದಲ್ಲಿ ತಾ. ೧೯ ರಿಂದ ಡಿಸೆಂಬರ್ ೯ರ ತನಕ ದಿನನಿತ್ಯ ಸಂಜೆ ೭ ಗಂಟೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಈ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯರಾದ ದಿನೇಶ್, ಜಯಲಕ್ಷಿö್ಮ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆÀ ಕೆ.ಪಿ. ಚಂದ್ರಕಲಾ, ಗೆಳೆಯರ ಬಳಗದ ಅಧ್ಯಕ್ಷ ವಿ.ಎಸ್. ಆನಂದ್ ಕುಮಾರ್, ವಿಎಸ್‌ಎಸ್‌ಎನ್ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಪದಾಧಿಕಾರಿಗಳು ಸದಸ್ಯರು ಹಾಗೂ ದೇವಾಲಯ ಸಮಿತಿ ಗೆಳೆಯರ ಬಳಗದ ಪ್ರಮುಖರು ಇದ್ದರು.

-ಚಂದ್ರಮೋಹನ್