೬ ಬಾಂಗ್ಲಾದೇಶ ಪ್ರಜೆಗಳು ಪೊಲೀಸರ ವಶಕ್ಕೆ

ಚಿತ್ರದುರ್ಗ, ನ. ೧೯: ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಬಳಿ ಅಕ್ರಮವಾಗಿ ಒಳನುಸುಳುವಿಕೆ ಮತ್ತು ನೆಲೆಸಿದ್ದಕ್ಕಾಗಿ ೬ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಶೇಕ್ ಸೈಫುರ್ ರೋಹಮಾನ್, ಮುಹಮ್ಮದ್ ಸುಮನ್ ಹುಸೇನ್ ಅಲಿ, ಮಜರುಲ್, ಅಜೀಜುಲ್ ಶೇಕ್, ಮುಹಮ್ಮದ್ ಸಾಕಿಬ್ ಸಿಕ್ದರ್ ಮತ್ತು ಸನೋವರ್ ಹೊಸೈನ್ ಬಂಧಿತರು. ತಾ. ೧೮ ರಂದು, ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಅರವಿಂದ್ ಗಾರ್ಮೆಂಟ್ಸ್ ಮತ್ತು ವೈಟ್ ವಾಶ್ ಗಾರ್ಮೆಂಟ್ಸ್ ಬಳಿ ಗಸ್ತು ತಿರುಗುತ್ತಿದ್ದಾಗ, ಧವಳಗಿರಿ ಲೇಔಟ್‌ನ ಎರಡನೇ ಹಂತದಲ್ಲಿ ಆರು ಬಾಂಗ್ಲಾದೇಶ ಪ್ರಜೆಗಳನ್ನು ಬಂಧಿಸಲಾಯಿತು ಎಂದು ಪೊಲೀಸರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪಘಾತದಲ್ಲಿ ಮೂವರು ಮಕ್ಕಳು ಸೇರಿ ಆರು ಮಂದಿ ಸಾವು

ಗುಜರಾತ್, ನ. ೧೯: ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಖಾಸಗಿ ವ್ಯಾನ್‌ವೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ವೇದಾಚ್ ಗ್ರಾಮದ ೧೦ ಜನರು ಶುಕ್ಲತೀರ್ಥ ಕಡೆಗೆ ಹೋಗುತ್ತಿದ್ದಾಗ ಸೋಮವಾರ ರಾತ್ರಿ ೧೧ ಗಂಟೆ ಸುಮಾರಿಗೆ ಮಗ್ನಾಡ್ ಗ್ರಾಮದ ಬಳಿಯ ಜಂಬೂಸರ್-ಅಮೋದ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಜಂಬೂಸರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎವಿ ಪನಾಮಿಯಾ ತಿಳಿಸಿದ್ದಾರೆ. ಅಪಘಾತದಲ್ಲಿ ಆರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜಂಬೂಸರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಜಯದೇವ್ ಗೋಹಿಲ್(೨೩), ಸರಸ್ವತಿ ಗೋಹಿಲ್(೨೧), ಹಂಸಾ ಜಾದವ್(೩೫), ಸಂಧ್ಯಾ ಜಾದವ್ (೧೧), ವಿವೇಕ್ ಗೋಹಿಲ್ (೧೬) ಮತ್ತು ಕೀರ್ತಿ ಗೋಹಿಲ್(೬) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಬರಿಮಲೆ ಭಕ್ತರಿದ್ದ ಬಸ್ ಪಲ್ಟಿ; ೨೭ ಮಂದಿಗೆ ಗಾಯ

ವಯನಾಡ್(ಕೇರಳ), ನ. ೧೯: ಶಬರಿಮಲೆ ದೇವಸ್ಥಾನದಿಂದ ವಾಪಸ್ ಬರುತ್ತಿದ್ದ ಕರ್ನಾಟಕದ ಅಯ್ಯಪ್ಪಸ್ವಾಮಿ ಭಕ್ತರು ಪ್ರಯಾಣಿಸುತ್ತಿದ್ದ ಬಸ್ ಕೇರಳದ ವಯನಾಡಿನ ತಿರುನೆಲ್ಲಿ ಬಳಿ ಮಂಗಳವಾರ ಬೆಳಗ್ಗೆ ಪಲ್ಟಿಯಾಗಿದ್ದು, ಅಪಘಾತದಲ್ಲಿ ೨೭ ಪ್ರಯಾಣಿಕರು ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಇಬ್ಬರು ಮಕ್ಕಳು ಸೇರಿದಂತೆ ೪೫ ಜನರಿದ್ದ ಬಸ್ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ, ಮೈಸೂರಿನ ಹುಣಸೂರಿಗೆ ಹಿಂತಿರುಗುವಾಗ ಇಂದು ಬೆಳಿಗ್ಗೆ ೬ ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣವೇ ವಯನಾಡಿನ ಮಾನಂದವಾಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಗಾಯಗೊಂಡ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಕ್ಫ್ ಆಸ್ತಿ ವಿವಾದ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು, ನ. ೧೯: ವಕ್ಫ್ ಮಂಡಳಿಯಿAದ ರೈತರ ಭೂಮಿ ಒತ್ತುವರಿ ವಿರೋಧಿಸಿ ತಾ. ೨೧ ಮತ್ತು ೨೨ ರಂದು ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ. ‘ನಮ್ಮ ಭೂಮಿ, ನಮ್ಮ ಹಕ್ಕು' ಘೋಷಣೆಯಡಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸುದ್ದಿಗಾರರಿಗೆ ತಿಳಿಸಿದರು. ಪ್ರತಿಭಟನೆ ವೇಳೆಯಲ್ಲಿ ತೊಂದರೆಗೀಡಾದ ರೈತರಿಂದ ದೂರು ಹಾಗೂ ಮಾಹಿತಿಯನ್ನು ಸ್ವೀಕರಿಸಲಾಗುವುದು. ಅಹವಾಲು ಸ್ವೀಕಾರಕ್ಕಾಗಿ ರೈತರು, ವಕೀಲರು ಮತ್ತು ಪ್ರಮುಖ ಪ್ರತಿನಿಧಿಗಳನ್ನೊಳಗೊಂಡ ಐವರು ಸದಸ್ಯರ ತಂಡವೊAದನ್ನು ಎಲ್ಲಾ ಜಿಲ್ಲೆಗಳಲ್ಲಿ ರಚಿಸಲಾಗಿದೆ ಎಂದರು. ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು. ಮೇಲುಸ್ತುವಾರಿಗಾಗಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕರು ಮತ್ತಿತರನ್ನೊಳಗೊಂಡ ಮೂರು ತಂಡವನ್ನು ರಚಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ಡಿಸೆಂಬರ್ ಆರಂಭದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ರೈತರು, ಧಾರ್ಮಿಕ ಮುಖಂಡರು ಮತ್ತಿತರಿಂದ ಮಾಹಿತಿ ಸಂಗ್ರಹಿಸಲಿದೆ. ಪ್ರಾಮಾಣಿಕವಾಗಿ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವರದಿಯನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು. ವಕ್ಫ್ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.