ಸೋಮವಾರಪೇಟೆ, ನ.೧೯: ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದ್ದು, ವಾಹನಗಳ ನಿಲುಗಡೆಯಂತೂ ಇನ್ನಿಲ್ಲದ ಸಮಸ್ಯೆ ತಂದೊಡ್ಡಿದೆ. ಖಾಸಗಿ ಬಸ್ ನಿಲ್ದಾಣವು ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ಖಾಸಗಿ ವಾಹನಗಳ ನಿಲ್ದಾಣವಾಗಿ ಮಾರ್ಪಡುತ್ತಿದ್ದು, ಅವಘಡಗಳು ಮಾಮೂಲಾಗಿವೆ.
ಇಂದು ಸಂಜೆ ವೇಳೆಯೂ ಇಂತಹದೇ ಘಟನೆ ನಡೆದಿದ್ದು, ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಾರಿಗೆ ಬಸ್ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲವಾದರೂ, ಸೋಮವಾರಪೇಟೆ ಪಟ್ಟಣದ ಸಂಚಾರ ದುರವಸ್ಥೆಗೆ ಬೆಳಕು ಚೆಲ್ಲಿದೆ.
ಸಂಜೆ ಪಟ್ಟಣಕ್ಕೆ ಆಗಮಿಸಿದ ಖಾಸಗಿ ಬಸ್, ನಿಲುಗಡೆಗೊಳ್ಳಲು ಹಿಂಬದಿಗೆ ಚಲಿಸುತ್ತಿದ್ದ ಸಂದರ್ಭ, ನಿಲ್ದಾಣದಲ್ಲಿ ನಿಲ್ಲಿಸಿದ ಕಾರಿಗೆ ಡಿಕ್ಕಿಯಾಗಿದೆ. ಇದರಿಂದ ಕಾರು ಜಖಂಗೊAಡಿದೆ.
ಬಸ್ ನಿಲ್ದಾಣದಲ್ಲಿ ಪ್ರತಿದಿನ ಖಾಸಗಿ ವಾಹನಗಳು ನಿಲುಗಡೆಯಾಗುತ್ತಿದ್ದು, ಪೊಲೀಸರು ತಮ್ಮಷ್ಟಕ್ಕೆ ತಾವಿರುತ್ತಾರೆ. ವಾಹನ ಚಾಲಕರು ಮತ್ತು ಬಸ್ ಕಾರ್ಮಿಕರ ನಡುವೆ ಹಲವು ಬಾರಿ ಇದೇ ವಿಷಯಕ್ಕೆ ಹೊಡೆದಾಟಗಳೂ ನಡೆದಿವೆ. ಗೃಹರಕ್ಷಕ ದಳದ ಸಿಬ್ಬಂದಿಗಳನ್ನೂ ಸಹ ಇಲ್ಲಿಗೆ ನಿಯೋಜಿಸುತ್ತಿಲ್ಲ. ಪರಿಣಾಮ ಬಸ್ ನಿಲ್ದಾಣ ಕಿಷ್ಕಿಂಧೆಯAತಾಗಿದೆ ಎಂದು ವರ್ತಕರು ಆರೋಪಿಸಿದ್ದಾರೆ.
ಇದರೊಂದಿಗೆ ತ್ರಿಬಲ್ ರೈಡಿಂಗ್, ಹೆಲ್ಮೆಟ್ ರಹಿತ ಪ್ರಯಾಣ, ಎಲ್ಲೆಂದರಲ್ಲಿ ವಾಹನ ನಿಲುಗಡೆ, ವಾಹನಗಳಲ್ಲಿ ಕಣ್ಣು ಕುಕ್ಕುವ ಹೆಚ್ಚುವರಿ ಲೈಟ್ಗಳ ಅಳವಡಿಕೆ, ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ ಮಾಮೂಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.