ಮಡಿಕೇರಿ, ನ. ೧೯: ಪೊನ್ನಂಪೇಟೆ ಸನಿಹದ ಜೋಡುಬೀಟಿ-ಕುಂದ ಸಂಪರ್ಕ ರಸ್ತೆಗೆ ೧೯೬೫ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ನಾಯಕ್ ಕೂಕಂಡ ಎನ್. ಪೊನ್ನಪ್ಪ ಅವರ ಹೆಸರನ್ನು ನಾಮಕರಣ ಮಾಡಿ ಉದ್ಘಾಟಿಸಲಾಯಿತು.
ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ನಾಮಕರಣಗೊಂಡ ರಸ್ತೆಯ ಪಕ್ಕದಲ್ಲಿ ಅಳವಡಿಸಲಾದ ಪೊನ್ನಪ್ಪ ಅವರ ಪರಿಚಯದ ಫಲಕವನ್ನು ಉದ್ಘಾಟಿಸಿ ಮಾತನಾಡಿ, ಭಾರತದ ಭದ್ರತೆಗಾಗಿ ಗಡಿಯಲ್ಲಿ ವೀರಯೋಧರು ಜೀವ ಮುಡಿಪಾಗಿಟ್ಟು ಹೋರಾಡುತ್ತಿದ್ದು, ಅವರಿಗೆ ಗೌರವ ಕೊಡುವ ಕೆಲಸ ಪ್ರತಿಯೊಬ್ಬರಿಂದಾಗಬೇಕು ಎಂದರು.
ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಸುಬ್ರಮಣಿ ಮಂದಣ್ಣ ಮಾತನಾಡಿ, ಪೊನ್ನಂಪೇಟೆಯಲ್ಲಿ ವೀರಯೋಧ ಕೂಕಂಡ ಪೊನ್ನಪ್ಪ ಸ್ಮಾರಕ ಭವನ ನಿರ್ಮಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೆರ ಕುಶಾಲಪ್ಪ, ಹಳ್ಳಿಗಟ್ಟು ದೇವಾಲಯ ಸಮಿತಿ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಪೊನ್ನಪ್ಪನವರ ಸಹೋದರ, ಮಾಜಿ ಯೋಧ ಕೂಕಂಡ ಕಾಶಿಯಪ್ಪ, ಬಿದ್ದಂಡ ಗೌರಮ್ಮ ಅವರುಗಳು ಮಾತನಾಡಿದರು. ಪುತ್ತರಿರ ಕರುಣ್ ಕಾಳಯ್ಯ ಕೂಕಂಡ ಪೊನ್ನಪ್ಪ ಅವರ ಬಗ್ಗೆ ಪರಿಚಯಿಸಿದರು.
ಕಾರ್ಯಕ್ರಮದ ಅಂಗವಾಗಿ ಪೊನ್ನಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಆರ್ಪಿಸಲಾಯಿತು.
ಪೊರೆರ ಕುಶಿ ಅಕ್ಕಮ್ಮ ಪ್ರಾರ್ಥಿಸಿ, ಕೂಕಂಡ ಪಟ್ಟೆದಾರ ಕೂಕಂಡ ರಾಜ ಕಾವೇರಿಯಪ್ಪ ಸ್ವಾಗತಿಸಿ, ಕೂಕಂಡ ಪೃಥ್ವಿ ಅಯ್ಯಪ್ಪ ವಂದಿಸಿ, ಕೂಕಂಡ ಪ್ರದೀಪ್ ಪೂವಯ್ಯ ನಿರೂಪಿಸಿದರು.