ಸುಂಟಿಕೊಪ್ಪ, ನ. ೨೦: ಐಗೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಅಧ್ಯಕ್ಷ ಜಿ.ಕೆ. ವಿನೋದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಲ ಜೀವನ್ ಕುಡಿಯುವ ನೀರಿನ ಕಾಮಗಾರಿಯಲ್ಲಿ ಕಳಪೆಯಾಗಿದೆ. ಬಡವರಿಗೆ ನೀರು ಸಿಗುತ್ತಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಬೆಳೆಗಾರರಿಗೆ ನೀಡುವ ಕರಿಮೆಣಸು ಗಿಡ ಹೊರಜಿಲ್ಲೆಗೆ ರವಾನೆಯಾಗಿದೆ ಎಂಬ ಆರೋಪಗಳು ಗಂಭೀರ ಚರ್ಚೆಗೆ ಕಾರಣವಾಯಿತು. ಕಾಜೂರು ಅರಣ್ಯ ವಸತಿ ಗೃಹದ ಬಳಿ ಬಸ್ ನಿಲ್ದಾಣದಲ್ಲಿ ಕಾಡಾನೆಗೆ ತಡೆಗಟ್ಟುವ ರೈಲ್ವೇ ಬ್ಯಾರಿಕೆಡ್ ರಚಿಸಲಾಗಿದೆ. ಇದರಿಂದ ಕಾಡಾನೆ ದಾಳಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಈ ಭಾಗದಲ್ಲಿ ಸಂಚರಿಸಲು ತೊಂದರೆಯಾಗಿದೆ ಎಂದು ಎಂ.ಕೆ. ಮೋಹನ್ ಪ್ರಸ್ತಾಪಿಸಿದರು. ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತೋಟಗಾರಿಕೆ ಇಲಾಖೆಯಲ್ಲಿ ಬೆಳೆಗಾರರಿಗೆ ನೀಡುವ ಕರಿಮೆಣಸು ಗಿಡ ನೈಜ ಬೆಳೆಗಾರರಿಗೆ ಸಿಗುತ್ತಿಲ್ಲ. ಹೊರಜಿಲ್ಲೆಗೆ ಲಾರಿಯಲ್ಲಿ ಸಾಗಿಸಲಾಗಿದೆ ಎಂದು ಪುಚ್ಚಿಮಂಡ ಮೋಹನ್ ಆರೋಪಿಸಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾ.ಪಂ. ಮಾಜಿ ಸದಸ್ಯ ದಿನೇಶ್ ಹೇಳಿದರು. ಪಡಿತರ ಅಕ್ಕಿ ವಿತರಣೆಯಲ್ಲಿ ವ್ಯತ್ಯಯವಾಗುತ್ತಿದೆ. ಅಂತ್ಯೋದಯ ಕಾರ್ಡುದಾರರಾರ ಗಿರಿಜನರಿಗೆ ತೂಕದಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು. ಕಂದಾಯ ಇಲಾಖೆ, ಆರೋಗ್ಯ, ಆಹಾರ, ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರುಗಳಾದ ಬೇಬಿ, ಪೂರ್ಣಿಮಾ, ಜಾನಕ್ಕಿ, ಮೇದಪ್ಪ, ಜೋಯಪ್ಪ, ಜೈನುದ್ದೀನ್, ಪವಿತ್ರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಸಿ. ಪೂರ್ಣಕುಮಾರ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.