ಸಿದ್ದಾಪುರ, ನ. ೨೦: ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆ ಬರಡಿ ಗ್ರಾಮದಲ್ಲಿ ಕೋತಿಗಳ ಹಾವಳಿ ಮಿತಿ ಮೀರಿದ್ದು ಗ್ರಾಮಸ್ಥರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಬರಡಿ ಗ್ರಾಮದಲ್ಲಿ ನೂರಾರು ಕೋತಿಗಳು ದಿನನಿತ್ಯ ಅಲ್ಲಿನ ನಿವಾಸಿಗಳ ಮನೆಗಳ ಮೇಲ್ಛಾವಣಿಗೆ ಬಂದು ಹೆಂಚುಗಳನ್ನು ಎಳೆದು ಹಾಕುತ್ತಿದೆ. ಅಲ್ಲದೆ ಕಿಟಕಿಯ ಮೂಲಕ ಮನೆಗಳಲ್ಲಿ ಇರುವಂತ ವಸ್ತುಗಳನ್ನು ತಿಂದು ಉಪಟಳ ನೀಡುತ್ತಿದೆ.

ಕೋತಿ ಉಪಟಳದಿಂದಾಗಿ ಮನೆಯ ಮೇಲ್ಭಾಗದಲ್ಲಿ ಯಾವುದೇ ವಸ್ತುಗಳನ್ನು ಇಡದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿರುವ ಕೋತಿಗಳನ್ನು ನಿವಾಸಿಗಳು ಕಷ್ಟಪಟ್ಟು ಓಡಿಸಿದರೂ ಕೂಡ ಮತ್ತೆ ಮನೆಗಳ ಮೇಲೆ ಬಂದು ದಾಂಧÀಲೆ ನಡೆಸುತ್ತಿದೆ. ಹಣ್ಣು ಹಂಪಲುಗಳ ಮರಗಳನ್ನು ಹಾನಿಗೊಳಿಸುತ್ತ ಕಾಫಿ ಫಸಲುಗಳನ್ನು ಕೂಡ ಹಾನಿಗೊಳಿಸುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೋತಿಗಳ ಉಪಟಳದಿಂದ ಬರಡಿ ನಿವಾಸಿಗಳು ಭಯಭೀತರಾಗಿದ್ದಾರೆ. ಕೂಡಲೇ ಕೋತಿಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.