ಮಡಿಕೇರಿ, ನ. ೨೦: ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ರೂ. ೪೪ ಲಕ್ಷ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಮುಖ್ಯಮಂತ್ರಿ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಒಟ್ಟು ರೂ. ೪೦ ಲಕ್ಷ ವೆಚ್ಚದಲ್ಲಿ ಮಕ್ಕಂದೂರು ಭಾಗದ ಹೊದಕಾನ ಕೂಡುರಸ್ತೆಯಿಂದ ಕೋಟೆಬೆಟ್ಟ ರಸ್ತೆ ಅಗಲೀಕರಣ, ಮುಕ್ಕೋಡ್ಲು-ಕಲ್ಲುಕೊಟ್ಟು ರಸ್ತೆ, ಮೇಘತ್ತಾಳು-ತಂತಿಪಾಲ ಕಿರುವಾಲೆ ರಸ್ತೆ ಸೇರಿದಂತೆ ಗ್ರಾಮದ ಇನ್ನಿತರ ಮಾರ್ಗಗಳ ಅಭಿವೃದ್ಧಿ, ಸಿ.ಎಂ.ಜಿ.ಎಸ್.ವೈ. ಯೋಜನೆಯಡಿ ರೂ. ೪ ಲಕ್ಷ ವೆಚ್ಚದಲ್ಲಿ ಮಕ್ಕಂದೂರು ನಾಗಬಾಣೆ ಕಾಲೋನಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಮಂತರ್ ಗೌಡ, ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಸರಕಾರವೂ ಸೂಕ್ತ ಅನುದಾನ ನೀಡಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಮಗಾರಿಗಳು ಕ್ಷೇತ್ರ ವ್ಯಾಪ್ತಿ ನಡೆಯಲಿವೆ ಎಂದರು.
ಈ ಸಂದರ್ಭ ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ಶ್ಯಾಮ್ ಸುಬ್ಬಯ್ಯ, ಡೀನಾ, ಕವಿತಾ, ಸುನಂದ, ಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮೋಹನ್ ದಾಸ್, ಜಿ.ಪಂ. ಮಾಜಿ ಸದಸ್ಯ ಸುಜು ತಿಮ್ಮಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಮುಖಂಡ ಅಚ್ಚಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.