ಮಡಿಕೇರಿ, ನ.೨೦: ಕನ್ನಡ ಅನ್ನದ ಭಾಷೆಯಾಗಬೇಕು, ಉದ್ಯೋಗದ ಭಾಷೆಯಾಗಬೇಕು, ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಉದ್ಯೋಗಕ್ಕಾಗಿ ಆಂಗ್ಲ ಭಾಷೆಯನ್ನು ಮೆಚ್ಚಿಕೊಳ್ಳುವುದು ಅವಶ್ಯವಾಗಿದೆ ಎಂದು ಮಡಿಕೇರಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಪ್ರಸನ್ನ ನುಡಿದರು.

ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ, ಮಡಿಕೇರಿ ಇವರ ಸಹಯೋಗದಲ್ಲಿ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಪಂಚೆ ಮಂಗೇಶರಾಯರು ಕೊಡಗಿನ ಹುತ್ತರಿ ಹಾಡು "ಎಲ್ಲಿ ಭೂರಮೆ ದೇವಸನ್ನಿದಿ ಬಯಸಿ ನಿಮ್ಮನೆ ಬಂದಳೋ" ಹಾಡನ್ನು ರಚಿಸಿದವರು. ಅವರು ಈ ಶಾಲೆಯಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ನೆನಪಿಗಾಗಿ ೧೫೦ನೇ ವರ್ಷಾಚರಣೆಯನ್ನು ಮುಂದಿನ ದಿನಗಳಲ್ಲಿ ಇದೇ ಕಾಲೇಜಿನ ಆವರಣದಲ್ಲಿ ನಡೆಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕಾವೇರಿ ಪ್ರಕಾಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಅಂಬೆಕಲ್ ನವೀನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡಿನ ಕುರಿತು ರಚಿಸಿದ ನೃತ್ಯಗಳನ್ನು ಪ್ರದರ್ಶನ ಮಾಡಿದರು.

ಕೊನೆಯಲ್ಲಿ ಮಾತನಾಡಿದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಸಾಹಿತ್ಯ ಪರಿಷತ್ತು ಕನ್ನಡ ನಾಡು-ನುಡಿ, ಪರಂಪರೆ, ಇತಿಹಾಸ ಇವುಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಿಕೊಂಡು ಬರುತ್ತಿದೆ. ಅವೆಲ್ಲದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ನಾಪೋಕ್ಲು ಹೋಬಳಿ ಕ.ಸಾ.ಪ ಅಧ್ಯಕ್ಷರಾದ ನೆರವಂಡ ಉಮೇಶ್, ಸಾಹಿತಿಗಳಾದ ಬಿ ಆರ್ ಜೋಯಪ್ಪ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚುರು, ತಾಲೂಕು ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಚೊಕ್ಕಾಡಿ ಪ್ರೇಮ ರಾಘವಯ್ಯ, ಮಡಿಕೇರಿ ತಾಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಪುದಿಯನೆರವನ ರಕ್ಷಿತ್ ಮಾದಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಕನ್ನಡ ದ್ವಜಾರೋಹಣ ಮತ್ತು ತಾಯಿ ಭುವನೇಶ್ವರಿ ಪಟಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಕಾವೇರಿ ಪ್ರಕಾಶ್ ಸ್ವಾಗತಿಸಿದರು. ಉಪನ್ಯಾಸಕಿ ಸುಪ್ರಿಯ ನಿರೂಪಿಸಿದರು.