ಕೂಡಿಗೆ, ನ. ೨೦: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಅಲಂಕಾರಿಕ ಉಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ಮುಖ್ಯ ಅತಿಥಿಗಳಾಗಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ.ಕಣ್ಣನ್ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಹಾಗೂ ಶಾಲಿನಿ ಪ್ರಕಾಶ್ರಾವ್ ಹಾಜರಿದ್ದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರ ಮಕ್ಕಳು ಹಲವು ಮಕ್ಕಳು ವಿವಿಧ ಅಲಂಕಾರಿಕ ಉಡುಗೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯು ೩ ವಿಭಾಗಗಳಲ್ಲಿದ್ದು, ವಿಭಾಗ ಎ- ೦-೫ ವರ್ಷದೊಳಗಿನ ಮಕ್ಕಳು, ವಿಭಾಗ ಬಿ ೦೬ ರಿಂದ ೧೦ ವರ್ಷ ಹಾಗೂ ವಿಭಾಗ ಸಿ ೧೧ರಿಂದ ೧೫ ವರ್ಷದ ಮಕ್ಕಳು ಭಾಗವಹಿಸಿದ್ದರು. ಈ ಅಲಂಕಾರಿಕ ಉಡುಗೆ ಸ್ಪರ್ಧೆಯು ಆಧುನಿಕ ಜಗತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಾಮಾಜಿಕ ಜೀವನದ ವಿವಿಧ ಮಜಲುಗಳ ಅನಾವರಣವಾಗಿದ್ದಿತು.
ಈ ಸ್ಪರ್ಧೆಯಲ್ಲಿದ್ದ ಎಲ್ಲಾ ಮಕ್ಕಳು ತಮ್ಮ ಉಡುಗೆಯ ಕುರಿತು ವಿವರಣೆ ನೀಡುತ್ತಾ ತಮ್ಮ ಹಾವ ಭಾವಗಳ ಮೂಲಕ ಸಭಿಕರನ್ನು ಆಕರ್ಷಿಸಿದರು. ಇದರೊಂದಿಗೆ ‘ಎ’ ವಿಭಾಗದಿಂದ ಪುಟಾಣಿ ಕಲ್ಯಾಣಿ ಪ್ರಥಮ ಬಹುಮಾನ, ದೃಪದ್ ದ್ವಿತೀಯ ಬಹುಮಾನ, ಆಯತ್ ಮತ್ತು ನಕ್ಷ್ ತೃತೀಯ ಬಹುಮಾನವನ್ನು ಪಡೆದರೆ, ‘ಬಿ’ ವಿಭಾಗದಿಂದ ಪುಟಾಣಿ ಆಶ್ರಿತ್ ಪ್ರಥಮ, ಹೊನ್ನು ದ್ವಿತೀಯ ಬಹುಮಾನ ಹಾಗೂ ಯುಗೇಶ್ ಮತ್ತು ದೇವೇಶ್ವರ್ ತೃತೀಯ ಬಹುಮಾನವನ್ನು ಪಡೆದರೆ, ‘ಸಿ’ ವಿಭಾಗದಿಂದ ಶಿವಮೂರ್ತಿ ಪ್ರಥಮ ಸ್ಥಾನವನ್ನು, ಮನಶ್ಚಂದ್ರಿಕಾ ದ್ವಿತೀಯ ಬಹುಮಾನವನ್ನು ಹಾಗೂ ಮೊನೀಷಾ ತೃತೀಯ ಸ್ಥಾನವನ್ನು ಪಡೆದರು.
ಈ ಸಂದರ್ಭದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಇಂಥಹ ಸ್ಪರ್ಧೆಗಳು ಮಕ್ಕಳಲ್ಲಿರುವ ಸೃಜನಶೀಲತೆ, ನೈಜತೆ ಹಾಗೂ ಸಭಾಕಂಪನವನ್ನು ಹೋಗಲಾಡಿಸುವುದರೊಂದಿಗೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಬುನಾದಿಯನ್ನು ಕಲ್ಪಿಸಲಿದರು.
ಇದರೊಂದಿಗೆ ಮಕ್ಕಳ ದೈನಂದಿನ ಬದುಕಿನ ಶೈಕ್ಷಣಿಕ ಚಟುವಟಿಕೆಗಳ ಒತ್ತಡಗಳಿಂದ ಮನಸ್ಸು ಆಹ್ಲಾದ ಹೊಂದಲು ಇಂಥಹ ಸ್ಪರ್ಧೆಗಳ ಸಹಕಾರಿಯಾಗಲಿವೆ ಎಂದರು.
ಹಾಗೆಯೇ ಮಕ್ಕಳು ಇಂಥಹ ಸ್ಪರ್ಧೆಯಲ್ಲಿ ಹೆಚ್ಚು ಹೆಚ್ಚು ಪಾಲ್ಗೊಂಡು ತಮ್ಮ ಸುಪ್ತ ಪ್ರತಿಭೆಯನ್ನು ಹೊರಜಗತ್ತಿನೆದುರಿಗೆ ಅನಾವರಣಗೊಳಿಸಬೇಕೆಂದು ಕರೆ ನೀಡಿದರು. ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಮತ್ತು ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.