ಕರಿಕೆ, ನ. ೨೦: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆಪಿಲಾವು ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಚಿರತೆ ಸೆರೆಗೆ ಬೋನ್ ಅಳವಡಿಸಲು ಕೊಡಗು ಅರಣ್ಯ ವೃತ್ತದ ಮಡಿಕೇರಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಭಾಸ್ಕರ ಬಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗ್ರಾಮದಲ್ಲಿ ಚಿರತೆ ಉಪಟಳ ನೀಡುವ ಸ್ಥಳ ಪರಿಶೀಲನೆ ನಡೆಸಿದ ಅವರು, ಗ್ರಾಮಸ್ಥರಿಗೆ ಧೈರ್ಯ ತುಂಬಿ ಚಲನವಲನಗಳನ್ನು ಗಮನಿಸಲು ಅಳವಡಿಸಲಾಗಿದ್ದ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಚಿರತೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೂಡಲೇ ಬೋನ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ "ಶಕ್ತಿ"ಯೊಂದಿಗೆ ಮಾತನಾಡಿದ ಭಾಸ್ಕರ್ ಸುಮಾರು ಎರಡುವರೆ ವರ್ಷ ವಯಸ್ಸಿನ ಚಿರತೆ ಇದಾಗಿದ್ದು, ಇತ್ತೀಚೆಗೆ ತಾಯಿಯಿಂದ ಬೇರ್ಪಟ್ಟಿರುವ ಸಾಧ್ಯತೆ ಇದೆ. ಇದನ್ನು ವಾರದೊಳಗೆ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು ಎಂದರು. ಈ ಸಂದರ್ಭ ಭಾಗಮಂಡಲ ವಲಯ ಅರಣ್ಯ ಅಧಿಕಾರಿ ರವೀಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಮಾಜಿ ಉಪಾಧ್ಯಕ್ಷ ಹೊದ್ದೆಟ್ಟಿ ಸುಧೀರ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿಗಳಾದ ಸಚಿನ್ ಬಿರಾದಾರ್, ಪರಮೇಶ್, ಮಂಜುನಾಥ ವಡೆಯರ್, ಅರಣ್ಯ ರಕ್ಷಕ ರಫೀಕ್ ಆಹಮದ್, ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು. -ಸುಧೀರ್ ಹೊದ್ದೆಟ್ಟಿ