ಮಡಿಕೇರಿ, ನ. ೨೦ : ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಹೇಳುತ್ತಾರೆ, ಆದರೆ ಸಹಕಾರ ಕ್ಷೇತ್ರ ಸೇರಿದಂತೆ ಪ್ರತಿಯೊಂದು ರಂಗದಲ್ಲಿಯೂ ಸಹ ಜಾತಿ, ಸಮಾಜ, ರಾಜಕಾರಣ ಇದ್ದೇ ಇದೆ. ಇದರ ನಡುವೆಯೂ ಹಿಂದಿನವರು ಕಟ್ಟಿಕೊಂಡು ಬಂದಿರುವ ಸಹಕಾರ ಕ್ಷೇತ್ರವನ್ನು ಬಲಪಡಿಸುವುದು ಅತ್ಯವಶ್ಯಕ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆಯಿಂದ ಕರ್ನಾಟಕ ಇನ್ಸ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಹಾಗೂ ಸ್ಥಳೀಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭವನದಲ್ಲಿ ೭೧ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಪ್ರಾಯೋಜಿತ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವು ಸಹಕಾರ ಸಂಘಗಳನ್ನು ಕಟ್ಟುವಲ್ಲಿ ಹಿರಿಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ನೀಡುವ ಸಂದರ್ಭ ಕೊಡಗು ಜಿಲ್ಲೆಯವರಿಗೆ ನೀಡಲು ಮೀನಾಮೇಷ ಎಣಿಸುತ್ತಾರೆ ಎಂದು ಮನು ಮುತ್ತಪ್ಪ ವಿಷಾದಿಸಿದರು.
ಸಹಕಾರ ಸಂಘಗಳಲ್ಲಿ ದುಡಿಯುತ್ತಿರುವವರಲ್ಲಿ ಯಾವುದೇ ರೀತಿಯ ಸ್ವಾರ್ಥ ಇರಬಾರದು. ಸ್ವಾರ್ಥ ಇದ್ದಲ್ಲಿ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಎಂದರು.
ಸಹಕಾರ ಯೂನಿಯನ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಸಹಕಾರದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಸಹಕಾರಿಗಳನ್ನು ಗುರುತಿಸಿ ಗೌರವಿಸಲು ಮುಂದಾಗಲಾಗಿದೆ ಎಂದು ಹೇಳಿದರು.
ಹಿರಿಯ ಸಹಕಾರಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳನ್ನು ಹಿರಿಯರು ಉಳಿಸಿ, ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಸಹಕಾರ ಸಂಘಗಳನ್ನು ಇನ್ನಷ್ಟು ಹೆಚ್ಚಿನ
(ಮೊದಲ ಪುಟದಿಂದ) ಅಭಿವೃದ್ಧಿಪಡಿಸಲು ಗಮನಹರಿಸಬೇಕು ಎಂದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ನಾಪಂಡ ಉಮೇಶ್ ಉತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ದುಡಿದವರನ್ನು ಗುರುತಿಸಿ ಗೌರವಿಸುವುದು ಅತ್ಯಗತ್ಯವಾಗಿದೆ. ಸಹಕಾರ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದರು.
ಸಹಕಾರ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುವವರು ಸಮಾಜಮುಖಿಯಾಗಿ ಯೋಚಿಸಬೇಕು. ಈ ನಿಟ್ಟಿನಲ್ಲಿ ಸಹಕಾರ ಸಂಘಗಳ ಮಹತ್ವ ಬಗ್ಗೆ ಎಲ್ಲರಿಗೂ ಅರಿವಿರಬೇಕು ಎಂದರು.
ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಆರ್.ವಿಜಯ್ ಕುಮಾರ್ ಮಾತನಾಡಿ ಸಹಕಾರ ಸಂಘಗಳ ಮಹತ್ವದ ಬಗ್ಗೆ ಮಾಹಿತಿ ನೀಡುವಲ್ಲಿ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಚಿಂತನ-ಮAಥನ ನಡೆಯಬೇಕು ಎಂದರು.
ಸಹಕಾರ ಸಂಘಗಳ ಮೂಲಕ ಗ್ರಾಮಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು ಎಂದರು. ಕೆಐಸಿಎಂನ ನಿವೃತ್ತ ಪ್ರಾಂಶುಪಾಲೆ ಎಂ.ಎA. ಶ್ಯಾಮಲ ಸಹಕಾರ ಕ್ಷೇತ್ರದ ಮಹತ್ವ ಕುರಿತು ಮಾತನಾಡಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಉಪಾಧ್ಯಕ್ಷ ಪಟ್ಟಡ ಮನು ರಾಮಚಂದ್ರ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಪಿ.ಸಿ. ಅಚ್ಚಯ್ಯ, ಪ್ರೇಮ ಸೋಮಯ್ಯ, ಕೋಡಿರ ಎಂ. ತಮ್ಮಯ್ಯ, ವಿ.ಕೆ. ಅಜಯ್ ಕುಮಾರ್, ಪಿ.ಬಿ. ಯತೀಶ್, ಎ.ಎಸ್. ಶ್ಯಾಮ್ ಚಂದ್ರ, ಎನ್.ಎ. ರ‍್ಯಾಲಿ ಮಾದಯ್ಯ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಎಂ.ಎನ್. ಹೇಮಾವತಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶೈಲಜಾ ಹಾಗೂ ಇತರರು ಇದ್ದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು, ಮಂಜುಳಾ ಪ್ರಾರ್ಥಿಸಿದರು.