ಗೋಣಿಕೊಪ್ಪ ವರದಿ, ನ. ೨೦: ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಹಾಕಿ ಕರ್ನಾಟಕ ವತಿಯಿಂದ ನಡೆದ ಮಿನಿ ಒಲಂಪಿಕ್ ೧೪ ವಯೋಮಿತಿಯ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ಹಾಕಿ ಕೂರ್ಗ್ ಬಾಲಕರ ತಂಡ ಚಾಂಪಿಯನ್ ಸ್ಥಾನ ಪಡೆದಿದ್ದು, ಬಾಲಕಿಯರು ತಂಡ ಕಂಚಿನ ಸ್ಥಾನ ಉಳಿಸಿಕೊಂಡಿದೆ.

ಬಾಲಕರು ಧಾರವಾಡ ವಿರುದ್ದ ೨-೧ ಗೋಲುಗಳಿಂದ ಟೈಬ್ರೇಕರ್‌ನಲ್ಲಿ ಗೆಲವು ಸಾಧಿಸಿದ್ದು, ಹಾಕಿಕೂರ್ಗ್ ಪರ ಬಲ್ಯಂಡ ಸಂಚಯ್ ತಮ್ಮಯ್ಯ ಮೊದಲ ಗೋಲು ಬಾರಿಸಿದರು. ಧಾರವಾಡ ೧ ಗೋಲು ಬಾರಿಸಿ ಸಮಬಲ ಸಾಧಿಸಿದ ಹಿನ್ನೆಲೆ ಟೈಬ್ರೇಕರ್ ಮೊರೆ ಹೋಗಲಾಯಿತು. ಹಾಕಿ ಕೂರ್ಗ್ ಪರ ಅಮ್ಮಾಂಡೀರ ಧೈವಿಕ್ ಪೊನ್ನಣ್ಣ ಏಕೈಕ ಗೋಲು ಮತ್ತು ಗೋಲ್ ಕೀಪರ್ ಕೋಡಿ ದರ್ಶನ್ ಅವರ ಆಟದಿಂದ ೨-೧ ಗೋಲುಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಸತತ ಮೂರನೇ ಬಾರಿಗೆ ಚಾಂಪಿಯನ್ ಸ್ಥಾನ ದೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿತು.

ಅತ್ಯುತ್ತಮ ಮುನ್ನಡೆ ಆಟಗಾರನಾಗಿ

(ಮೊದಲ ಪುಟದಿಂದ) ಗೋಣಿಕೊಪ್ಪ ಕ್ಯಾಲ್ಸ್ ತಂಡದ ಆಟಗಾರನಾಗಿರುವ ಹಾಕಿಕೂರ್ಗ್ ತಂಡದ ಅಮ್ಮಾಂಡಿರ ದೈವಿಕ್ ಪೊನ್ನಣ್ಣ ಪ್ರಶಸ್ತಿ ಪಡೆದುಕೊಂಡರು. ಕೊಡಿ ದರ್ಶನ್ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿ ತನ್ನದಾಗಿಸಿಕೊಂಡರು.

ಮೊದಲ ವರ್ಷ ಪ್ರಥಮ ಸ್ಥಾನದೊಂದಿಗೆ, ಎರಡನೇ ಮತ್ತು ಮೂರನೇ ವರ್ಷ ಬಾಲಕಿಯರು ಕಂಚಿನ ಸ್ಥಾನ ಉಳಿಸಿಕೊಂಡಿದ್ದಾರೆ. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಬೆಳಗಾವಿ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿ ಸ್ಥಾನ ಭದ್ರವಾಗಿಸಿಕೊಂಡರು. ಚಾರೀರ ಧನ್ಯ ಕಾವೇರಮ್ಮ ೨ ಗೋಲು ಬಾರಿಸಿ ಗೆಲುವಿನ ರೂವಾರಿಯಾದರು. ತಂಡದ ನಾಯಕಿ ನೇಹ ಪಂದ್ಯಾವಳಿಯ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಪಡೆದರು.

ಹಾಕಿ ಕರ್ನಾಟಕ ಕಾರ್ಯದರ್ಶಿ ಅಂಜಪರವAಡ ಬಿ. ಸುಬ್ಬಯ್ಯ, ಹಾಕಿಕೂರ್ಗ್ ಕಾರ್ಯದರ್ಶಿ ಅಮ್ಮಾಂಡೀರ ಚೇತನ್, ಬಾಲಕರ ತರಬೇತುದಾರರಾಗಿ ತೀತಮಾಡ ವಿನು, ವ್ಯವಸ್ಥಾಪಕರಾಗಿ ವಿನೋದ್, ಬಾಲಕಿಯರ ತರಬೇತುದಾರ ವಿನೋದ್, ವ್ಯವಸ್ಥಾಪಕಿ ಕೊಕ್ಕಲೆಮಾಡ ಗೌತಮಿ ಇದ್ದರು.