ಚೆಯ್ಯಂಡಾಣೆ, ನ. ೨೧: ನರಿಯಂದಡ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಭತ್ತದ ಗದ್ದೆ ಸಂಪೂರ್ಣ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸ್ಥಳೀಯ ನರಿಯಂದಡ ಗ್ರಾಮದ ಪೋಕ್ಕುಳಂಡ್ರ ದನೋಜ್ ಕುಮಾರ್ ಅವರಿಗೆ ಸೇರಿದ ಗದ್ದೆಯಲ್ಲಿ ೪ ಕ್ಕೂ ಅಧಿಕ ಕಾಡಾನೆಗಳ ಹಿಂಡು ಸೋಮವಾರ ಮಧ್ಯರಾತ್ರಿ ದಾಳಿ ನಡೆಸಿ ಸಂಪೂರ್ಣ ನಾಶ ಮಾಡಿದೆ.
ಕಳೆದ ಎರಡು ದಿನದ ಹಿಂದೆ ಇದೆ ಗ್ರಾಮದ ಪೋಕ್ಕುಳಂಡ್ರ ಈರಪ್ಪ ಹಾಗೂ ಸದಾ ಅವರ ತೋಟ ಹಾಗೂ ಗದ್ದೆಯನ್ನು ಕಾಡಾನೆ ತುಳಿದು ನಾಶಗೊಳಿಸಿತ್ತು.
ಕಳೆದ ಕೆಲವು ತಿಂಗಳುಗಳ ಹಿಂದೆ ೭ ಗ್ರಾಮದ ಗ್ರಾಮಸ್ಥರು ಸೇರಿ ಚೆಯ್ಯಂಡಾಣೆ ಪಟ್ಟಣದ ವೀರಾಜಪೇಟೆ, ನಾಪೋಕ್ಲು ರಸ್ತೆಯಲ್ಲಿ ಪ್ರತಿಭಟನೆ ಹೋರಾಟ ನಡೆಸಿದ್ದರು. ಆಶ್ವಾಸನೆ ನೀಡಿ ತೆರಳಿದ್ದ ಅರಣ್ಯಾಧಿಕಾರಿಗಳು ಇದುವರೆಗೂ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.