ಸಿದ್ದಾಪುರ, ನ. ೨೧ : ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭ ಕಾರ್ಯಾಚರಣೆಯ ತಂಡವನ್ನು ಕಾಡಾನೆಗಳು ಬೆನ್ನಟ್ಟಿದ ಘಟನೆ ವೀರಾಜಪೇಟೆ ವಲಯ ಪುದುಕೋಟೆ, ಐಮಂಗಲ ಗ್ರಾಮಗಳಲ್ಲಿ ನಡೆದಿದೆ. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಫುದುಕೋಟೆ, ಐಮಂಗಲ, ಮಗ್ಗುಲ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂಧಲೆ ನಡೆಸುತ್ತಿದೆ. ಅಲ್ಲದೆ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಗಳನ್ನು ಕಾಡಿಗಟ್ಟಲು ಒತ್ತಾಯಿಸಿದ್ದರು. ಗುರುವಾರದಿಂದ ಬೆಳಿಗ್ಗೆ ಉಪ ವಲಯ ಅರಣ್ಯ ಅಧಿಕಾರಿ ಕಳ್ಳಿರ ದೇವಯ್ಯ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಕಾಡಾನೆಗಳ ಗುಂಪಿನಲ್ಲಿದ್ದ ಕಾಡಾನೆಗಳು ಬೇರ್ಪಟ್ಟು ಕಾಫಿ ತೋಟದೊಳಗೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡುತ್ತಾ ಕಾರ್ಯಾಚರಣೆ ತಂಡವನ್ನು ಸುಸ್ತು ಮಾಡಿಸಿತು. ಛಲ ಬಿಡದ ಕಾರ್ಯಾಚರಣೆ ತಂಡವು ಕಾಡಿಗಟ್ಟಲು ಪ್ರಯತ್ನಿಸಿದರು. ಕಾಡಾನೆಗಳು ಚಂಬೆಬೆಳ್ಳೂರು, ಪುದುಕೋಟೆ, ಐಮಂಗಲ ಬೆಟ್ಟದ ತುದಿವರೆಗೆ ತೆರಳಿ ನಂತರ ಹಿಂತಿರುಗಿ ತೋಟದತ್ತ ಲಗ್ಗೆಯಿಡುತ್ತಿದ್ದವು.
ಕಾರ್ಯಾಚರಣೆ ಸಂದರ್ಭ ಗುಂಪಿನಲ್ಲಿದ್ದ ಕಾಡಾನೆಗಳು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿ ದಾಳಿಗೆ ಯತ್ನಿಸಿತು. ಅಪಾಯ ಅರಿತ ಸಿಬ್ಬಂದಿಗಳು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಕಾಫಿ ತೋಟದೊಳಗೆ ಓಡಿ ಹೋದರು. ಕಾಡಾನೆಗಳ ಗುಂಪಿನಲ್ಲಿ ಬೇರ್ಪಟ್ಟ ಕಾಡಾನೆಗಳು ಕಾಫಿ ತೋಟಗಳಲ್ಲಿ ಉಳಿದುಕೊಂಡಿದ್ದು ಮತ್ತೆ ಕಾರ್ಯಾಚರಣೆಯನ್ನು ಇಂದಿನಿAದ ಮುಂದುವರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಗ್ರಾಮಸ್ಥರು ಸಾಥ್ ನೀಡಿದ್ದರು. ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್. ಹಾಗೂ ಎಸಿಎಫ್ ಗೋಪಾಲ್ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಆರ್‌ಆರ್‌ಟಿ ತಂಡ ಹಾಗೂ ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. -ವರದಿ ವಾಸು