ಸೋಮವಾರಪೇಟೆ, ನ. ೨೧: ಮನುಷ್ಯ ಸಾಮಾಜಿಕ ಸ್ವಾಸ್ಥö್ಯದೊಂದಿಗೆ ಸುಂದರ ಜೀವನ ನಡೆಸಲು ವಚನ ಸಾಹಿತ್ಯ ದೀವಿಗೆ ಇದ್ದಂತೆ ಎಂದು ಹೆಬ್ಬಾಲೆ ಪ್ರೌಢಶಾಲೆ ಕನ್ನಡ ಶಿಕ್ಷಕ ಮೆ.ನಾ. ವೆಂಕಟನಾಯಕ್ ಅಭಿಪ್ರಾಯಿಸಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶರಣ ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಹನ್ನೆರಡನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ನಡೆದ ಶರಣರ ಕ್ರಾಂತಿ ಸಮಾಜದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು ಎಂದರು. ಶರಣ ಸಂಸ್ಕೃತಿ ವಿಚಾರಗೋಷ್ಠಿ ಉದ್ಘಾಟಿಸಿದ ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ ಮಾತನಾಡಿ, ನೈತಿಕ ಮೌಲ್ಯ ಹಾಗೂ ಆದರ್ಶಗಳು ಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮನದಲ್ಲಿ ಶರಣರ ವಿಚಾರಧಾರೆಗಳು, ಸಾಹಿತ್ಯ ಮತ್ತು ಸಂಸ್ಕೃತಿಯ ಪುನರ್ ಪಠಣ ಅತ್ಯಗತ್ಯವಾಗಿದೆ ಎಂದರು. ವೇದಿಕೆಯಲ್ಲಿ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಕೆ.ಪಿ. ಆದರ್ಶ್, ಪ್ರಮುಖರಾದ ಕೂಗೇಕೋಡಿ ಬಾಲಶಂಕರ್ ಮತ್ತಿತರರು ಇದ್ದರು. ವಿದ್ಯಾರ್ಥಿನಿಯರಿಂದ ವಚನ ವೈಭವ ನೃತ್ಯ ನಡೆಯಿತು.