ಪೊನ್ನಂಪೇಟೆ, ನ. ೨೧: ಗ್ರಾಮ ಸಭೆಗೆ ಕೆಲವು ಇಲಾಖಾಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಸಭೆಯನ್ನೇ ಬಹಿಷ್ಕರಿಸಿ, ಹೊರನಡೆದ ಘಟನೆ ಕಿರುಗೂರು ಗ್ರಾಮ ಪಂಚಾ ಯಿತಿ ಗ್ರಾಮಸಭೆಯಲ್ಲಿ ನಡೆದಿದೆ.
ಗ್ರಾಮದ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸುವ, ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಹಾಗೂ ಸರಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಗ್ರಾಮಸಭೆಗೆ ಕೆಲವು ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಗ್ರಾಮಸ್ಥರು ಅತೃಪ್ತಿ ವ್ಯಕ್ತಪಡಿಸಿದರು.
ಕಿರುಗೂರು ಗ್ರಾ.ಪಂ. ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮಸಭೆಯನ್ನು ಆಯೋಜಿಸಲಾ ಗಿತ್ತು. ಸಭೆಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗ್ರಾಮ ಸಭೆಗೆ ಕೆಲವು ಇಲಾಖಾಧಿಕಾರಿಗಳನ್ನು ಹೊರತುಪಡಿಸಿದಂತೆ, ಬಹುತೇಕ ಇಲಾಖಾಧಿಕಾರಿಗಳು ಗೈರಾಗಿದ್ದರು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಕಿರುಗೂರು ಗ್ರಾಮ ಪಂಚಾಯಿತಿ ಪೊನ್ನಂಪೇಟೆ ತಾಲೂಕು ಕೇಂದ್ರದಿAದ ಕೇವಲ ನಾಲ್ಕು ಕಿಲೋ ಮೀಟರ್ ಅಂತರದಲ್ಲಿದ್ದರೂ ಕೂಡ ಕೆಲವು ಇಲಾಖಾಧಿಕಾರಿಗಳು ಸಭೆಗೆ ಗೈರಾಗಿರುವುದು ಗ್ರಾಮಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.
ಪೊಲೀಸ್, ಅಬಕಾರಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೀನುಗಾರಿಕೆ, ಪಶುಸಂಗೋಪನಾ ಇಲಾಖೆ, ಕಾಫಿ ಮಂಡಳಿ, ಅಂತರ್ಜಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾಮಾಜಿಕ ಲೆಕ್ಕ ಪರಿಶೋಧಕರು ಹಾಗೂ ವಸತಿ ಯೋಜನೆ ಇಲಾಖಾಧಿಕಾರಿಗಳು ಸೇರಿದಂತೆ ಸುಮಾರು ಹನ್ನೊಂದು ಇಲಾಖಾಧಿಕಾರಿಗಳು ಸಭೆಗೆ ಗೈರಾಗಿದ್ದು, ಗ್ರಾಮಸ್ಥರ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದೆಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸಿ, ಹೊರ ನಡೆದರು. ಗ್ರಾಮಸ್ಥರ ತೀರ್ಮಾನಕ್ಕೆ ಬದ್ದರಾಗಿ ಪಂಚಾಯಿತಿ ಆಡಳಿತ ಮಂಡಳಿಯ ಸರ್ವ ಸದಸ್ಯರು ಸಭೆಯನ್ನು ಮುಂದೂಡುವAತೆ ಆಗ್ರಹಿಸಿ ಹೊರನಡೆದರು.
ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಇಂದಿನ ಗ್ರಾಮಸಭೆ ಕುರಿತಂತೆ ಎಲ್ಲಾ ಇಲಾಖಾಧಿಕಾರಿ ಗಳಿಗೆ ಎರಡು ಬಾರಿ ಮನವಿ ಪತ್ರ ಕಳು ಹಿಸಲಾಗಿದೆ. ಅಲ್ಲದೇ ದೂರವಾಣಿಯ ಮೂಲಕವೂ ಮಾಹಿತಿ ನೀಡಲಾಗಿ ದ್ದರೂ ಸಹ ಹನ್ನೊಂದು ಇಲಾಖಾ ಧಿಕಾರಿಗಳು ಗ್ರಾಮಸಭೆಗೆ ಗೈರಾಗಿದ್ದು, ಈ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ತೀರ್ಮಾನಕ್ಕೆ ಬದ್ಧರಾಗಿ ಗ್ರಾಮ ಸಭೆಯನ್ನು ಮುಂದೂಡುವAತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು ನೋಡಲ್ ಅಧಿಕಾರಿಯನ್ನು ಕೇಳಿಕೊಂಡಿದ್ದೇನೆ. ಈ ಹಿಂದಿನ ಗ್ರಾಮಸಭೆಗೂ ಕೆಲವೊಂದು ಇಲಾ ಖಾಧಿಕಾರಿಗಳು ಗೈರಾಗಿದ್ದು, ಗೈರಾದ ಇಲಾಖಾಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವ ಭರವಸೆಯನ್ನು ಮೇಲ ಧಿಕಾರಿಗಳು ನೀಡಿದ್ದರು. ಈ ಬಗೆಗಿನ ಪತ್ರಕ್ಕೆ ಇಂದಿಗೂ ಉತ್ತರ ದೊರೆತ್ತಿಲ್ಲ ವೆಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಗ್ರಾಮಸಭೆ ನೋಡಲ್ ಅಧಿಕಾರಿ ನವೀನ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿ ಯಿಸಿ, ಇಂದಿನ ಗ್ರಾಮಸಭೆಗೆ ಕೆಲವು ಇಲಾಖಾಧಿಕಾರಿಗಳು ಗೈರಾದ ಹಿನ್ನೆ ಲೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಗೈರಾದ ಇಲಾಖಾಧಿಕಾರಿಗಳ ಗಮನ ಸೆಳೆಯು ವುದಾಗಿ ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿ ಕಾರಿಗಳ ಮೂಲಕ ಅಂತಹ ಅಧಿಕಾ ರಿಗಳಿಗೆ ನಿರ್ದೇಶನ ಕೊಡಿಸುವುದಾಗಿ ಭರವಸೆ ನೀಡಿದರೂ ಸಹ ಗ್ರಾಮಸ್ಥರು ಒಪ್ಪದ ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನು ಮುಂದೂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಸಭೆಗೆ ಹಾಜರಾಗುವಂತೆ ಮನವಿ ಮಾಡಲಾಗುವುದು. ಗೈರಾದ ಅಧಿಕಾರಿಗಳು ಮತ್ತು ನೌಕರರಿಗೆ ನೋಟಿಸ್ ನೀಡುವಂತೆ ನಡಾವಳಿ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಗ್ರಾ. ಪಂ. ಉಪಾಧ್ಯಕ್ಷೆ ಬಿ.ಎಂ. ಸುನಿತಾ, ಸದಸ್ಯರಾದ ಪುತ್ತಮನೆ ಜೀವನ್, ಕಾಕೇರ ರವಿ, ಕಾವೇರಮ್ಮ, ಸುಮಿತ್ರ, ರಂಗಸ್ವಾಮಿ, ರೇಖಾ ಪೆಮ್ಮಯ್ಯ, ಕೆ.ಕೆ.ಲಲಿತ, ಕಾರ್ಯದರ್ಶಿ ರಾಧ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ ಸಫೀಕ್, ಸಿಬ್ಬಂದಿ ಹರೀಶ್, ರವಿ ಮತ್ತಿತರರು ಇದ್ದರು.
- ಚನ್ನನಾಯಕ