ಮಡಿಕೇರಿ, ನ. ೨೧: ಸರಕಾರ ನಗರದ ರಾಜರ ಗದ್ದುಗೆ ಸ್ಥಳದ ಒತ್ತುವರಿಯನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿರುವ ಹಿನ್ನೆಲೆ ಜಿಲ್ಲಾಧಿಕಾರಿ ಈ ಸಂಬAಧ ತ್ವರಿತವಾಗಿ ಕ್ರಮಕೈಗೊಳ್ಳಬೇಕೆಂದು ವೀರಶೈವ ಮಹಾಸಭಾ ಜಿಲ್ಲಾ ಘಟಕ ಒತ್ತಾಯಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಹೆಚ್.ಬಿ. ಶಿವಪ್ಪ, ೧೯.೮೬ ಎಕರೆ ಜಾಗದ ಪೈಕಿ ೧.೧೮ ಎಕರೆ ಒತ್ತುವರಿ ತೆರವಿಗೆ ಆದೇಶ ಬಂದಿದ್ದು, ತಡಮಾಡದೆ ಜಿಲ್ಲಾಧಿಕಾರಿ ಒತ್ತುವರಿದಾರರು ತೆರವು ಮಾಡಿ ಗದ್ದುಗೆ ಪ್ರದೇಶವನ್ನು ಅಭಿವೃದ್ಧಿಗೊಳಿಸಬೇಕು. ಪ್ರವಾಸೋದ್ಯಮ ದೃಷ್ಟಿಯಲ್ಲಿ ಈ ಜಾಗ ಪೂರಕವಾಗಿದ್ದು, ಜಾಗದ ಅಭಿವೃದ್ಧಿಯೊಂದಿಗೆ ಆಕರ್ಷಕಗೊಳಿಸಿ ಉತ್ತಮ ವಾತಾವರಣ ಸೃಷ್ಟಿಸಬೇಕೆಂದು ಆಗ್ರಹಿಸಿದರು.
ಡಿ. ೨೨ ಹಾಗೂ ೨೫ ರಂದು ಕುಶಾಲನಗರಲ್ಲಿ ವೀರಶೈವ ಸಮುದಾಯ ಬಾಂಧವರ ಕ್ರೀಡಾಕೂಟ ಹಾಗೂ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ರೀಡಾಕೂಟ ಕುಶಾಲನಗರ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ, ಸನ್ಮಾನ ಕಾರ್ಯಕ್ರಮ ಎಪಿಸಿಎಂಎಸ್ ಸುವರ್ಣ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯದರ್ಶಿ ಶಂಭಾಶಿವಯ್ಯ ಮಾತನಾಡಿ, ಒತ್ತುವರಿ ತೆರವು ಮಾಡಿ ಸರಕಾರದ ಆದೇಶವನ್ನು ತ್ವರಿತವಾಗಿ ಅನುಷ್ಠಾನ ಮಾಡುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ಹೆಚ್.ಜೆ. ಪ್ರವೀಣ್, ಎಸ್.ಎಸ್. ಸುರೇಶ್, ನಿರ್ದೇಶಕ ಮಹದೇವಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಆದರ್ಶ್ ಹಾಜರಿದ್ದರು.