ಮಡಿಕೇರಿ, ನ. ೨೧: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಪೊನ್ನಂಪೇಟೆ ಜೆಸಿಐ ನಿಸರ್ಗ ಸಂಸ್ಥೆ ಸಹಯೋಗದೊಂದಿಗೆ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮುಂದಿನ ಡಿ. ೮ ರಂದು ಮಾಯಮುಡಿ ಶಾಲಾ ಮೈದಾನದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಇದನ್ನು ಸ್ಪರ್ಧೆಯಾಗಿ ಮಾಡದೆ ಬಂದೂಕು ಹಬ್ಬವಾಗಿ ಆಚರಣೆ ಮಾಡಲಾಗುವದೆಂದು ಹೇಳಿದರು. ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. .೨೨ ವಿಭಾಗದಲ್ಲಿ ೫೦ ಮೀಟರ್ ನಿಗದಿಪಡಿಸಲಾಗಿದ್ದು, ಪ್ರಥಮ ಬಹುಮಾನ ರೂ. ೩೦ ಸಾವಿರ, ದ್ವಿತೀಯ ರೂ. ೨೦ ಸಾವಿರ, ತೃತೀಯ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ೧೨ ಬೋರ್ ಬಂದೂಕು ವಿಭಾಗದಲ್ಲಿ ಪ್ರಥಮ, ೨೫ ಸಾವಿರ, ದ್ವಿತೀಯ ೧೫ ಸಾವಿರ ಹಾಗೂ ತೃತೀಯ ೧೦ ಸಾವಿರ ಹಾಗೂ ನಗದು, ಏರ್‌ಗನ್ ವಿಭಾಗದಲ್ಲಿ ಪ್ರಥಮ ೧೦ ಸಾವಿರ, ದ್ವಿತೀಯ ರೂ. ೮ ಸಾವಿರ ಹಾಗೂ ತೃತೀಯ ರೂ. ೬ ಸಾವಿರ ನಗದು ಹಾಗೂ ಟ್ರೋಫಿಯನ್ನು ಬಹುಮಾನವನ್ನಾಗಿ ನೀಡಲಾಗುವುದೆಂದು ತಿಳಿಸಿದರು. ೧೮ ವರ್ಷ ಮೇಲ್ಪಟ್ಟವರು ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಏರ್‌ಗನ್ ಸ್ಪರ್ಧೆಗೆ ಯಾವುದೇ ವಯೋಮಿತಿ ಇರುವುದಿಲ್ಲ ಎಂದು ಹೇಳಿದರು.

ಅಂದು ಬೆಳಿಗ್ಗೆ ೯ ಗಂಟೆಗೆ ನಡೆಯುವ ಬಂದೂಕು ಹಬ್ಬವನ್ನು ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಉದ್ಘಾಟಿಸುವರು. ಬಂದೂಕಿನ ಅವಶ್ಯಕತೆ, ಸಂವಿಧಾನದಲ್ಲಿ ಬಂದೂಕು ಹಕ್ಕನ್ನು ಹೊಂದಿಕೊಳ್ಳುವ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವಿಚಾರ ಮಂಡನೆ ಏರ್ಪಡಿಸಲಾಗಿದ್ದು, ವಕೀಲ ಬಲ್ಯಮಾಡ ಮಧು ಮಾದಪ್ಪ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ೧೫೦ಕ್ಕೂ ಅಧಿಕ ಮಂದಿ ಆನ್‌ಲೈನ್ ಮೂಲಕ ನೋಂದಾವಣೆ ಮಾಡಿಕೊಂಡಿದ್ದು, ಅಂದಾಜು ೪೫೦ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇರುವುದಾಗಿ ಹೇಳಿದರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಪ್ಪಂಡೇರAಡ ದಿನು (೯೧೪೮೯೭೮೯೧೯), ಆಪಟ್ಟಿರ ಟಾಟು ಮೊಣ್ಣಪ್ಪ (೯೪೪೯೨೫೫೦೮೧) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಹೇಶ್ ಮಾಹಿತಿ ನೀಡಿದರು. ಜೆಸಿಐ ವಲಯ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ ಮಾತನಾಡಿ, ಜೆಸಿಐ ಸಂಸ್ಥೆ ಓರ್ವ ವ್ಯಕ್ತಿಯ ವಿಕಸನದೊಂದಿಗೆ ಉತ್ತಮ ಪ್ರಜೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಸಮಾಜಸೇವೆ, ಕ್ರೀಡಾಕೂಟ ಹಾಗೂ ಇನ್ನಿತರ ಸಮಾಜಮುಖಿ ಕಾರ್ಯ ಕ್ರಮಗಳನ್ನು ಕೂಡ ಹಮ್ಮಿಕೊಂಡು ಬರುತ್ತಿದೆ. ಎರಡು ವರ್ಷ ಬಂದೂಕು ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿದ್ದು, ಇದೀಗ ಅಕಾಡೆಮಿ ಸಹಯೋಗ ದೊಂದಿಗೆ ಮೂರನೇ ಬಾರಿಗೆ ಹಮ್ಮಿಕೊಂಡಿರುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರುಗಳಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಪಾಣಿಕುಟ್ಟಿರ ರಾಧ ಕುಟ್ಟಪ್ಪ, ಜೆಸಿಐ ಅಪ್ಪಂಡೇರAಡ ದಿನು, ಪೆಮ್ಮಂಡ ಮಂಜು ಬೋಪಣ್ಣ ಇದ್ದರು.