ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು, ನ. ೨೭: ರಾಜ್ಯದಲ್ಲಿ ವಕ್ಫ್ ಮಂಡಳಿಯ ಭೂ ವಿವಾದ ಭುಗಿಲೆದ್ದ ಬೆನ್ನಲ್ಲೇ ಕೊಡಗಿನಲ್ಲಿ ಅರಣ್ಯ ಇಲಾಖೆಗೆ ನೀಡಲಾಗಿರುವ ಸಿ ಮತ್ತು ಡಿ ಭೂಮಿಯ ಕುರಿತು ವಿವಾದವು ಸಂಕಷ್ಟವನ್ನು ತಂದಿಟ್ಟಿದೆ. ಈ ವಿವಾದವು ಇಂದು ನಿನ್ನೆಯದಲ್ಲ ಇದಕ್ಕೆ ದಶಕಗಳ ಇತಿಹಾಸವೇ ಇದೆ. ಹಾರಂಗಿ ಆಣೆಕಟ್ಟೆ ನಿರ್ಮಾಣದಿಂದ ನಿರಾಶ್ರಿತರಾದವರಿಗೆ ಭೂಮಿ ಒದಗಿಸಲು ಅಂದು ರಾಜ್ಯ ಸರ್ಕಾರ ಪರ್ಯಾಯ ಭೂಮಿ ನೀಡುವ ಘೋಷಣೆ ಮಾಡಿತ್ತಾದರೂ ಯಾರೂ ತಲೆಕೆಡಿಸಿಕೊಳ್ಳದ ಕಾರಣ ಅದು ಕಾಗದದಲ್ಲೇ ಉಳಿದಿತ್ತು. ಅರಣ್ಯ ಇಲಾಖೆಯೂ ಮರೆತೇ ಬಿಟ್ಟಿತ್ತು. ಆಗ ಕೆಲವರು ೨೦೧೭ ರಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಭೂಮಿ ನೀಡಬೇಕೆಂದರು. ೨೧-೪-೨೦೨೧ ರಂದು ಕೋರ್ಟ್ ತೀರ್ಪು ನೀಡಿದೆ. ಅಷ್ಟೇ ಆಗಿದ್ದರೂ ಏನೂ ಆಗುತ್ತಿರಲಿಲ್ಲ; ಆದರೆ ಪುನಃ ಆದೇಶ ಜಾರಿ ಆಗದ ಕುರಿತು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೆ ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಅವರು ಅರಣ್ಯ ಕಾಯ್ದೆ ಸೆಕ್ಷನ್ ೪ ರ ಅನ್ವಯ ಅಧಿಸೂಚನೆ ಹೊರಡಿಸಿದ್ದಾರೆ. ಹೀಗಾಗಿ ಕೊಡಗಿನ ನೂರಾರು ರೈತರು ೫೦-೮೦ ವರ್ಷ ಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿ, ಮನೆ-ಮಠ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಹಾರAಗಿ ನಿರಾಶ್ರಿತರಿಗೆ ನೀಡಿದ್ದು ಎಷ್ಟು ?
೧೯೭೦ನೇ ಇಸವಿಯಲ್ಲಿ ನಿರ್ಮಾಣ ಆರಂಭಗೊAಡ ಹಾರಂಗಿ ಜಲಾಶಯ ೧೯೮೨ ರಲ್ಲಿ ಪೂರ್ಣ ಗೊಂಡಿತು. ಇದರಲ್ಲಿ ಮುಳುಗಡೆ ಆದ ರೈತರಿಗೆ ಯಡವನಾಡು ಮತ್ತು ಅತ್ತೂರು ಮೀಸಲು ಅರಣ್ಯದಲ್ಲಿ ಸುಮಾರು ೩೭೦೦ ಹೆಕ್ಟೇರ್ ಭೂಮಿಯನ್ನು ಕಳಕೊಂಡ ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಹಂಚಲಾಯಿತು. ಆದರೆ ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಅರಣ್ಯ ಭೂಮಿಯನ್ನು ನೀಡಿದ್ದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಮೂರು ಪಟ್ಟು ಭೂಮಿಯನ್ನು ಅರಣ್ಯವನ್ನಾಗಿಸಲು ಅರಣ್ಯ ಇಲಾಖೆಗೆ ಹಿಂತಿರುಗಿಸಿ ಕೊಡಬೇಕು. ಅದರಂತೆ ಸುಮಾರು ೧೧,೭೨೨ ಹೆಕ್ಟೇರ್
(ಮೊದಲ ಪುಟದಿಂದ) ಭೂಮಿಯನ್ನು ಗುರುತಿಸಿ ಅರಣ್ಯ ಇಲಾಖೆಗೆ ನೀಡುವ ಆದೇಶವನ್ನೂ ಹೊರಡಿಸಲಾಯಿತು. ಈ ಆದೇಶವನ್ನು ೧೨-೫-೧೯೭೨ ರಂದು ಹೊರಡಿಸಲಾಗಿದ್ದು ಆಗ ಹಾರಂಗಿ ಆಣೆಕಟ್ಟೆ ಇನ್ನೂ ನಿರ್ಮಾಣ ಹಂತದಲ್ಲಿತ್ತು. ಆದರೆ ಕಾಗದದಲ್ಲೇ ಉಳಿದಿದ್ದ ಭೂಮಿ ಹಸ್ತಾಂತರಕ್ಕೆ ೧೯೯೧ ರ ಜೂನ್ ತಿಂಗಳಿನಲ್ಲಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತು.
ಮುಂದಾಲೋಚನೆಯ ಕೊರತೆಯಿಂದ ಸಂಕಷ್ಟ ಸೃಷ್ಟಿ
ಅಂದು ಅರಣ್ಯ ಇಲಾಖೆಯಿಂದ ಭೂಮಿ ಪಡೆದು ಮೂರು ಪಟ್ಟು ಭೂಮಿಯನ್ನು ವಾಪಾಸ್ ನೀಡುವ ಬದಲಿಗೆ ರಾಜ್ಯ ಸರ್ಕಾರ ೧೯೭೨ ರಲ್ಲಿಯೇ ಗುರುತಿಸಿದ್ದ ಭೂಮಿಯನ್ನೇ ನಿರಾಶ್ರಿತರಿಗೆ ಹಂಚಿಬಿಟ್ಟಿದ್ದರೆ ಇಂದು ಸಮಸ್ಯೆಯೇ ಇರುತ್ತಿರಲಿಲ್ಲ. ಅತ್ತೂರು ಮತ್ತು ಯಡವನಾಡು ಅರಣ್ಯದಲ್ಲಿ ಕಾಡು ಪ್ರಾಣಿಗಳ ಓಡಾಟಕ್ಕೂ ತಡೆ ಆಗುತ್ತಿರಲಿಲ್ಲ. ಅಂದು ಸರ್ಕಾರ ನೀಡಲು ಆದೇಶ ಹೊರಡಿಸಿರುವ ಭೂಮಿಯಲ್ಲಿ ಪೈಸಾರಿ, ಊರುಡುವೆ, ದೇವರಕಾಡು, ಕಂದಾಯ ಭೂಮಿ ಕೂಡ ಸೇರಿವೆ. ಆದರೆ ಅಂದು ಇದ್ದ ೧೧ ಸಾವಿರ ಹೆಕ್ಟೇರ್ ಭೂಮಿ ಒತ್ತುವರಿಗೀಡಾಗಿ ಇಂದು ವ್ಯವಸಾಯಕ್ಕೆ, ಮನೆಗಳ ನಿರ್ಮಾಣಕ್ಕೆ ಬಳಕೆ ಆಗಿದೆ. ನೂರಾರು ಕುಟುಂಬಗಳ ಜೀವನಾಧಾರವೂ ಆಗಿದೆ.
ಸರ್ಕಾರಿ ಭೂಮಿ ಒತ್ತುವರಿ ಮತ್ತು ಸಕ್ರಮ
ಜನಸಂಖ್ಯೆ ಬೆಳೆದಂತೆಲ್ಲ ಜನರು ಮನೆ ನಿರ್ಮಾಣಕ್ಕೆ ಮತ್ತು ಬದುಕಿನ ಅವಶ್ಯಕತೆಗೆ ಕಳೆದ ೫ ದಶಕಗಳಲ್ಲಿ ಮೇಲೆ ಹೇಳಿದ ಭೂಮಿಯನ್ನು ಬಳಸಿಕೊಂಡರು. ಮೊದಲು ಒತ್ತುವರಿ ಮಾಡಿಕೊಂಡವರಿಗೆ ರಾಜ್ಯ ಸರ್ಕಾರವೇ ಅವರ ಹೆಸರಿಗೆ ಮನೆ ಹಕ್ಕುಪತ್ರ, ಭೂಮಿಯ ಆರ್ಟಿಸಿಯನ್ನೂ ಮಾಡಿಕೊಟ್ಟಿದೆ. ಆದರೆ ತಡವಾಗಿ ಒತ್ತುವರಿ ಮಾಡಿಕೊಂಡಿರುವವರು ಇಂದಿಗೂ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಅವರಿಗೆ ಆರ್ಟಿಸಿ ಇಲ್ಲ ಜೊತೆಗೆ ಒಕ್ಕಲೆಬ್ಬಿಸುವ ಭೀತಿ ಸೃಷ್ಟಿಯಾಗಿದೆ. ಹೀಗೆ ರೈತರು ಆತಂಕದಿAದ ದಿನ ದೂಡುವಂತಾಗಿದೆ. ಅಲ್ಲದೆ ಇತರ ಪ್ರಕರಣಗಳಲ್ಲಿ ಸರ್ಕಾರವೇ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಭೂಮಿಯನ್ನು ಲೀಸ್ಗೆ ನೀಡುವ ಮೂಲಕ ಒತ್ತುವರಿದಾರರಿಗೇ ಅನುಕೂಲವನ್ನೂ ಮಾಡಿಕೊಟ್ಟಿದೆ. ಅಲ್ಲದೆ ಅಕ್ರಮ ಸಕ್ರಮ ಸಮಿತಿಗಳೂ ಸಾವಿರಾರು ಜನರ ಮನೆಗಳಿಗೂ ಹಕ್ಕು ಪತ್ರ ನೀಡಿವೆ. ಮತ್ತೊಂದೆಡೆ ಕೋರ್ಟಿನ ಆದೇಶದ ಮೇರೆಗೆ ಅರಣ್ಯ ಇಲಾಖೆ ಇದೀಗ ಭೂಮಿ ತೆರವುಗೊಳಿಸಿ ವಶಕ್ಕೆ ಪಡೆಯಲು ಮುಂದಾಗಿದೆ.
ಮೈಸೂರಿನಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿ ಆದೇಶ
ರಾಜ್ಯ ಸರ್ಕಾರ ಮೈಸೂರಿನಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿ (ಈoಡಿesಣ seಣಣಟemeಟಿಣ oಜಿಜಿiಛಿeಡಿ) ಕಚೇರಿಯನ್ನೂ ತೆರೆದಿದ್ದು ಇಲ್ಲಿಗೆ ನಿವೃತ್ತ ಉಪವಿಭಾಗಾದಿಕಾರಿಗಳನ್ನು ಅಧಿಕಾರಿಯಾಗಿ ನೇಮಿಸಲಾಗಿದೆ. ಇವರು ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದು, ರಾಜ್ಯ ಸರ್ಕಾರ ಗೆಜೆಟ್ ನೊಟಿಫಿಕೇಷನ್ನಲ್ಲಿ ನೀಡಿರುವ ಸರ್ವೆ ನಂಬರ್ಗಳ ಜಮೀನುಗಳನ್ನು ಮೀಸಲು ಅರಣ್ಯ ಎಂದು ಘೋಷಿಸಲು ಅಧಿಸೂಚನೆ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ಎರಡನೇ ಬಾರಿಗೆ ದಿನಾಂಕ ೨೦-೭-೧೯೯೪ ರಂದು (ಆದೇಶ ಸಂಖ್ಯೆ ಆರ್ಡಿ ೧೦೬ ಎಲ್ಜಿಪಿ ೮೮) ಎರಡನೇ ಬಾರಿಗೆ ಅರಣ್ಯ ಇಲಾಖೆಗೆ ಭೂಮಿಯನ್ನು ಹಸ್ತಾಂತರಿಸಲು ಆದೇಶಿಸಿತ್ತು. ಇದೇ ಪಟ್ಟಿಯ ಮೂಲಕ ವ್ಯವಸ್ಥಾಪನಾ ಅಧಿಕಾರಿ ಮುಂದುವರೆಯುತ್ತಿದ್ದಾರೆ. ಇವರು ಹೊರಡಿಸಿರುವ ಪ್ರಕಟಣೆಯ ಪ್ರಕಾರ ಕೆಲವೊಂದು ಭೂಮಿಗಳ ಸರ್ವೆ ನಂಬರ್ಗಳ ಪ್ರಕಾರ ಇಡೀ ಗ್ರಾಮವೇ ಅರಣ್ಯ ಆಗಬೇಕಾಗುತ್ತದೆ. ಉದಾಹರಣೆಗೆ ಸೋಮವಾರಪೇಟೆ ತಾಲೂಕಿನ ಹರಗ ಗ್ರಾಮವೊಂದರಲ್ಲೇ ೫೦೦ ಹೆಕ್ಟೇರ್ ಇದರ ವ್ಯಾಪ್ತಿಗೊಳಪಟ್ಟಿದೆ. ಶಾಂತಳ್ಳಿ, ತೋಳೂರು ಶೆಟ್ಟಳ್ಳಿ, ಇತರ ಗ್ರಾಮಗಳಲ್ಲಿ ೫೦-೧೦೦ ಹೆಕ್ಟೇರ್ ಭೂಮಿ ಇದೆ. ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಗುರುತಿಸಿರುವ ಭೂಮಿಯಲ್ಲಿ ಮಡಿಕೇರಿ ತಾಲೂಕಿನದೇ ಸಿಂಹಪಾಲು ಆಗಿದೆ. ಕರಿಕೆ ಗ್ರಾಮ ವ್ಯಾಪ್ತಿಯಲ್ಲಿಯೇ ಸುಮಾರು ೧೧ ಸಾವಿರ ಎಕರೆ ಭೂಮಿ ಇದ್ದು ಇದೂ ಕೂಡ ಒತ್ತುವರಿಗೆ ತುತ್ತಾಗಿದ್ದು ರಬ್ಬರ್ ಕಾಫಿ ಪ್ಲಾಂಟೇಷನ್ಗಳಾಗಿವೆ. ರೈತರ ಬಳಿ ೧೯೯೧ಕ್ಕಿಂತ ಭೂಮಿಯನ್ನು ಹೊಂದಿರುವ ಬಗ್ಗೆ ಕಂದಾಯ ಅಥವಾ ಅರಣ್ಯ ಇಲಾಖೆಯ ಯಾವುದೇ ದಾಖಲಾತಿ ಇದ್ದಲ್ಲಿ ಅಂತಹ ಭೂಮಿಯನ್ನು ವಶಕ್ಕೆ ಪಡೆಯುವುದಿಲ್ಲ ಎಂದು ವ್ಯವಸ್ಥಾಪನಾಧಿಕಾರಿ ರೇಣುಕಾಂಬ ತಿಳಿಸಿದ್ದಾರೆ.
ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಪಷ್ಟನೆ
ರಾಜ್ಯ ಸರ್ಕಾರವು ೧೯೯೧ ರಲ್ಲಿ ಹೊರಡಿಸಿರುವ ಗೆಜೆಟ್ ಅಧಿಸೂಚನೆ ಮತ್ತು ೧೯೯೪ ರಂದು ನೀಡಿರುವ ಆದೇಶದಂತೆ ಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ನ್ಯಾಯಾಂಗ ಇಲಾಖೆಯ ಅರ್ಜಿಯ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ಭೂಮಿಯನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರು ತಮ್ಮನ್ನು ಭೇಟಿ ಮಾಡಿದ್ದ ‘ಶಕ್ತಿ’ ಪ್ರತಿನಿಧಿಗೆ ತಿಳಿಸಿದರು. ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕಂದಾಯ, ಅರಣ್ಯ ಇಲಾಖೆಗೆ ನೋಟೀಸ್ ಜಾರಿ ಮಾಡಿದ್ದು ಇಲಾಖೆಯ ಮಟ್ಟದಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಹೇಳಿದ ಅವರು, ಸರ್ಕಾರದ ಮಟ್ಟದಲ್ಲಿ ಮಾತ್ರ ಈ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಮತ್ತು ರೈತರ ಹಿತ ಕಾಪಾಡಲು ಸಾಧ್ಯ ಎಂದು ತಿಳಿಸಿದರು.
ತಾಲೂಕು ಹೋರಾಟ ಸಮಿತಿ ಹೋರಾಟದ ಎಚ್ಚರಿಕೆ
ಈ ಭೂಮಿ ಹಸ್ತಾಂತರದ ವಿರುದ್ಧ ಸೋಮವಾರಪೇಟೆ ತಾಲೂಕಿನ ರೈತರು ಸಿಡಿದೆದ್ದಿದ್ದಾರೆ. ಈ ಕುರಿತು ಮಾತನಾಡಿದ ಸೋಮವಾರಪೇಟೆ ತಾಲೂಕು ಹೋರಾಟಗಾರರ ಮುಖಂಡ ಅರುಣ್ ಕಾಳಪ್ಪ ಅವರು ನೂರಾರು ರೈತರು ೧೯೭೦ ಕ್ಕಿಂತಲೂ ಮೊದಲೇ ಭುಮಿಯಲ್ಲಿ ಮನೆ ಕಟ್ಟಿಕೊಂಡು, ತೋಟ, ಗದ್ದೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ೧೯೭೨ರಲ್ಲೇ ಭೂಮಿಯನ್ನು ಹಸ್ತಾಂತರಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಈಗ ಜನವಸತಿ ಪ್ರದೇಶವನ್ನು ಹಸ್ತಾಂತರಿಸಿದರೂ ಅದರ ಉದ್ದೇಶ ಈಡೇರುವುದಿಲ್ಲ. ಅರಣ್ಯದ ಪಕ್ಕದಲ್ಲಿದ್ದರೆ ಮಾತ್ರ ಅರಣ್ಯ ನಿರ್ಮಾಣವಾಗುತ್ತದೆ ಎಂದರು. ರೈತರ ಬಳಿ ಸರ್ಕಾರದಿಂದ ನೀಡಿರುವ ಯಾವುದೇ ದಾಖಲಾತಿ ಇಲ್ಲ. ಈ ಪ್ರಕರಣವನ್ನು ರಾಜ್ಯ ಸರ್ಕಾರವೇ ಸೂಕ್ತ ತೀರ್ಮಾನ ತೆಗೆದುಕೊಂಡು ಬಗೆಹರಿಸಬೇಕಿದೆ ಎಂದರು; ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಶಾಸಕರ ಮಧ್ಯ ಪ್ರವೇಶ ಅವಶ್ಯಕ
ಕೊಡಗಿನಲ್ಲಿ ತಲೆದೋರಿರುವ ಈ ಸಮಸ್ಯೆಯು ಜಮ್ಮಾ ಬಾಣೆ ಸಮಸ್ಯೆಯಂತೆಯೇ ಇದ್ದು ರಾಜ್ಯ ಸರ್ಕಾರ ಸ್ಥಳೀಯ ಶಾಸಕರು, ಕಂದಾಯ, ಅರಣ್ಯ ಮಂತ್ರಿಗಳನ್ನೊಳಗೊAಡ ಉನ್ನತ ಮಟ್ಟದ ಸಭೆ ನಡೆಸುವ ಮೂಲಕ ಮಾತ್ರ ಈ ಗೊಂದಲ ನಿವಾರಿಸಬೇಕಾಗಿದೆ. ಇದು ಬರೇ ಮೂರು ಜಿಲ್ಲೆಗಳ ಸಮಸ್ಯೆ ಅಲ್ಲ, ಇಡೀ ರಾಜ್ಯಾದ್ಯಂತ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಎಲ್ಲ ಜಿಲ್ಲೆಗಳಲ್ಲೂ ಭೂಮಿ ಪಡೆಯಲು ನೋಟೀಸ್ ನೀಡುತ್ತಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿಯೇ ಈ ಕುರಿತು ತೀರ್ಮಾನ ತೆಗೆದುಕೊಂಡು ಇದಕ್ಕೆ ಅಂತ್ಯ ಹಾಡಬೇಕಿದೆ. ಇಲ್ಲದಿದ್ದರೆ ಅರಣ್ಯ ಇಲಾಖೆಯು ಒತ್ತುವರಿ ತೆರವಿಗೆ ಮುಂದಾದರೆ ದೊಡ್ಡ ಸಂಘರ್ಷವೂ ಉಂಟಾಗಲಿದೆ. ನಮ್ಮ ಶಾಸಕದ್ವಯರು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕಿದೆ.