ಸಂಭಾಲ್ ಹಿಂಸಾಚಾರ : ಪ್ರತಿಭಟನಾಕಾರರಿಂದಲೇ ನಷ್ಟ ವಸೂಲಿ
ಲಖನೌ, ನ. ೨೭: ಸಂಭಾಲ್ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾದ ನಷ್ಟದ ಪರಿಹಾರವನ್ನು ಪ್ರತಿಭಟನಾಕಾರರಿಂದಲೇ ವಸೂಲು ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಹಿಂಸಾಚಾರದಲ್ಲಿ ಕಲ್ಲು ತೂರಾಟ ನಡೆಸಿ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರತಿಭಟನಾಕಾರರ ಫೋಟೊಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ನಗರದ ಕೋಟ್ ಗರ್ವಿ ಪ್ರದೇಶದ ಶಾಹಿ ಜಾಮಾ ಮಸೀದಿಯ ಸರ್ವೇ ಕಾರ್ಯ ನಡೆಯುತ್ತಿದ್ದ ವೇಳೆ ಭಾನುವಾರ ಭುಗಿಲೆದ್ದ ಘರ್ಷಣೆಯಲ್ಲಿ ಐವರು ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ ಹಲವಾರು ಜನ ಗಾಯಗೊಂಡಿದ್ದರು. ಸಂಭಾಲ್ ಹಿಂಸಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಯುಪಿ ಸರ್ಕಾರ ಕಠಿಣ ನಿಲುವು ತಳೆದಿದೆ. ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ಪೋಸ್ಟರ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು ಮತ್ತು ನಷ್ಟದ ಪರಿಹಾರವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. ಗಲಭೆಕೋರರನ್ನು ಬಂಧಿಸಲು ಸಹಾಯಕವಾಗುವಂಥ ಮಾಹಿತಿ ನೀಡಿದವರಿಗೆ ಬಹುಮಾನವನ್ನು ಸಹ ಘೋಷಿಸಲಿರುವುದಾಗಿ ತಿಳಿದುಬಂದಿದೆ.
ಮರವೇರಿ ಹುಲಿ ದಾಳಿಯಿಂದ ಪಾರಾದ ಅರಣ್ಯ ಸಿಬ್ಬಂದಿ
ಭೋಪಾಲ್, ನ. ೨೭: ಅರಣ್ಯ ಸಿಬ್ಬಂದಿಯೊಬ್ಬರು ಹುಲಿ ದಾಳಿಯಿಂದ ಕ್ಷಣ ಮಾತ್ರದಲ್ಲಿ ಪಾರಾಗಿರುವ ಘಟನೆ ಮಧ್ಯಪ್ರದೇಶ ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಕರ್ತವ್ಯ ನಿರ್ವಹಣೆ ವೇಳೆ ಹುಲಿ ಆಗಮನ ಗ್ರಹಿಸಿದ ಇಬ್ಬರು ಸಿಬ್ಬಂದಿಗಳು ಕೂಡಲೇ ಪಕ್ಕದಲ್ಲೇ ಇದ್ದ ಮರವನ್ನು ಏರಿದ್ದಾರೆ. ಈ ವೇಳೆ ಓರ್ವ ಸಿಬ್ಬಂದಿ ತಮ್ಮ ಮೊಬೈಲ್‌ನಿಂದ ವೀಡಿಯೋ ರೆಕಾರ್ಡ್ ಮಾಡಿದ್ದು, ಮರವೇರಿದ ಬಳಿಕ ಭಾರಿ ಗಾತ್ರದ ಹುಲಿಯೊಂದು ಅದೇ ಪ್ರದೇಶದಲ್ಲಿ ತನ್ನ ಬೇಟೆ ಅರಸುತ್ತಾ ಬರುತ್ತದೆ. ಈ ವೇಳೆ ಮರದ ಮೇಲಿದ್ದ ಸಿಬ್ಬಂದಿ ಹುಲಿಯ ವೀಡಿಯೋ ರೆಕಾರ್ಡ್ ಮಾಡಿದ್ದು, ಕೆಲ ನಿಮಿಷಗಳ ಕಾಲ ಅಲ್ಲಿಯೇ ವಾಸನೆ ಗ್ರಹಿಸುತ್ತಿದ್ದ ಹುಲಿ ಬಳಿಕ ಅಲ್ಲಿಂದ ಹೊರಟು ಹೋಗುತ್ತದೆ. ಎದೆ ಝಲ್ ಎನ್ನಿಸುವ ಈ ವೀಡಿಯೋವನ್ನು ಅರಣ್ಯ ಅಧಿಕಾರಿ ಪ್ರವೀಣ್ ಕಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಈ ವೀಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಅಲ್ಲದೆ ಅರಣ್ಯ ಸಿಬ್ಬಂದಿಗಳ ಅಪಾಯದ ಗ್ರಹಿಕೆ ಮತ್ತು ಮುಂದಾಗಬಹುದಾದ ಅಪಾಯದಿಂದ ಪಾರಾದ ಬಗೆಯನ್ನು ಶ್ಲಾಘಿಸಿದ್ದಾರೆ.
ಗದ್ದಲ, ಕೋಲಾಹಲ: ಸಂಸತ್ತಿನ ಉಭಯ ಸದನಗಳ ಕಲಾಪ ಮುಂದೂಡಿಕೆ
ನವದೆಹಲಿ, ನ. ೨೭: ಗೌತಮ್ ಅದಾನಿ ಲಂಚ ವಿವಾದ, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಮತ್ತು ಇತರ ವಿಷಯಗಳ ಕುರಿತು ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯ ನಡುವೆ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ತಾ. ೨೮ಕ್ಕೆ ಮುಂದೂಡಲಾಗಿದೆ. ಇಂದು ಅಧಿವೇಶನದ ಆರಂಭದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ಮತ್ತು ವಿವಿಧ ವಿಷಯಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದ್ದರಿಂದ ಲೋಕಸಭೆಯ ಕಲಾಪವನ್ನು ಆರಂಭದಲ್ಲಿ ಮಧ್ಯಾಹ್ನ ೧೨ ರವರೆಗೆ ಮತ್ತು ನಂತರ ತಾ. ೨೮ಕ್ಕೆ ಮುಂದೂಡಲಾಯಿತು. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕೆಲವು ಸದಸ್ಯರು ಬಾವಿಗಿಳಿದರೆ ಇತರ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದರು.
ಕಳಸಾ-ಬಂಡೂರಿ ಯೋಜನೆಗೆ ಶೀಘ್ರ ಅನುಮತಿ ನೀಡಿ: ಕೇಂದ್ರ ಸಚಿವರಿಗೆ ಡಿ.ಕೆ. ಶಿವಕುಮಾರ್ ಮನವಿ
ನವದೆಹಲಿ, ನ. ೨೭: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ, ಕಳಸಾ-ಬಂಡೂರಿ ನೀರಾವರಿ ಯೋಜನೆಗೆ ಅನುಮತಿಯನ್ನು ತ್ವರಿತವಾಗಿ ನೀಡುವಂತೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು, ಕಳಸಾ-ಬಂಡೂರಿ ಯೋಜನೆಯು ರಾಜ್ಯದ ನೀರಿನ ಅಗತ್ಯಗಳಿಗೆ ನಿರ್ಣಾಯಕವಾಗಿದ್ದು, ಇದಕ್ಕೆ ಅಗತ್ಯವಿರುವ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು ಎಂದು ಮನವಿ ಸಲ್ಲಿಸಿದರು. ಕಳಸಾ-ಬಂಡೂರಿ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ೧೦.೬೮೫೨ ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಸುತ್ತಲಿನ ಹಳ್ಳಿಗಳ ಪ್ರದೇಶವನ್ನು ಇದು ಹೊಂದಿದೆ. ಇದರಲ್ಲಿ ಜಾಕ್‌ವೆಲ್ ಸಹಿತ ಪಂಪ್‌ಹೌಸ್, ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಡಿಸಿಎಂ ಕೇಂದ್ರ ಸಚಿವರಿಗೆ ನೀಡಿದ ಮನವಿ ಪತ್ರದಲ್ಲಿ ವಿವರಿಸಿದ್ದಾರೆ. ಅಕ್ಟೋಬರ್ ೯ ರಂದು ಕೇಂದ್ರ ಸಚಿವ ಭೂಪೇಂದರ್ ಯದಾವ್ ನೇತೃತ್ವದಲ್ಲಿ ನಡೆದ ಸ್ಥಾಯಿ ಸಮಿತಿಯ ೮೦ನೇ ಸಭೆಯಲ್ಲಿ ಈ ಪ್ರಸ್ತಾವನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಗೋವಾದ ವನ್ಯಜೀವಿ ಮಂಡಳಿ ಮುಖ್ಯಸ್ಥರು ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ ಸೆಕ್ಷನ್ ೨೯ ಅನ್ನು ಪ್ರಸ್ತಾಪಿಸಿ ಈ ಯೋಜನೆ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ರಾಜ್ಯವು ಸುಪ್ರೀಂಕೋರ್ಟ್ ಮುಂದೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದೆ' ಎಂದು ಹೇಳಿದ್ದಾರೆ.
ಯುವತಿಯೊಂದಿಗೆ ಅಸಭ್ಯ ವರ್ತನೆ-ಬಂಧನ
ಬೆAಗಳೂರು, ನ. ೨೭: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಾಮುಕರ ಹಾವಳಿ ಬಗ್ಗೆ ವರದಿಯಾಗಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ವರದಿಯಾಗಿದೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ರಸ್ತೆಯಲ್ಲಿ ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಂದಿಗೆ ಬೈಕ್‌ನಲ್ಲಿ ಬಂದ ಕಾಮುಕನೊಬ್ಬ ಅಸಭ್ಯ ವರ್ತನೆತೋರಿ ಪರಾರಿಯಾಗಿದ್ದಾನೆ. ಈ ಕೃತ್ಯದ ಸಿಸಿಟಿವಿ ವೀಡಿಯೋ ಈಗ ವೈರಲ್ ಆಗಿದ್ದು, ಸಿಲಿಕಾನ್ ಸಿಟಿ ಮಂದಿ ಬೆಚ್ಚಿ ಬೀಳುವಂತೆ ಮಾಡಿದೆ. ಕೆಲ ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೈಕ್ ಸವಾರ ಅರುಣ್ ಎಂಬಾತನೇ ಅಸಭ್ಯ ವರ್ತನೆ ತೋರಿದ್ದು, ದೂರು ನೀಡಿದ ಎರಡೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.