ಶ್ರೀಮಂಗಲ, ನ. ೨೭ : ಕೊಡಗು ಜಿಲ್ಲೆಯ ಬಹುಕಾಲದ ವಿದ್ಯುತ್ ಸಮಸ್ಯೆ ಸರಿಪಡಿಸಲು ವಿದ್ಯುತ್ ಉನ್ನತೀಕರಣಕ್ಕೆ ಸರ್ಕಾರದಿಂದ ರೂ. ೨೦೮ ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಹೆಜ್ಜೆ ಇಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಹೇಳಿದರು.

ಪೊನ್ನಂಪೇಟೆ ಪಟ್ಟಣದ ಭಗವತಿ ನಗರದ ಬಹುವರ್ಷದ ಬೇಡಿಕೆಯಾದ ವಿದ್ಯುತ್ ಸಮಸ್ಯೆ ನಿವಾರಿಸಲು ನೂತನವಾಗಿ ಸ್ಥಾಪಿಸಿದ ಹೆಚ್ಚುವರಿ ೬೩ ಕೆವಿಯ ಪರಿವರ್ತಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕೊಡಗು ಜಿಲ್ಲೆಯವರೇ ಆಗಿದ್ದು ಅವರೊಂದಿಗೆ ಸಮಾ ಲೋಚಿಸಿ ಅವರ ಸಹಕಾರದೊಂದಿಗೆ ವಿದ್ಯುತ್ ಉನ್ನತೀಕರಣಕ್ಕೆ ರೂ. ೨೦೮ ಕೋಟಿ ಅನುದಾನವನ್ನು ಚೆಸ್ಕಾಂಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸುಮಾರು ರೂ. ೧೦೮ ಕೋಟಿ ವೀರಾಜಪೇಟೆ ಕ್ಷೇತ್ರದ ವ್ಯಾಪ್ತಿಗೆ ದೊರೆಯಲಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ೧೦ ಲಕ್ಷ ಕಿಲೋಮೀಟರ್ ವಿದ್ಯುತ್ ತಂತಿಗಳು ಹಾದುಹೋಗಿವೆ. ಪ್ರಸಕ್ತ ವರ್ಷ ಅತಿ ಹೆಚ್ಚಿನ ಬಿರುಗಾಳಿ ಮಳೆಯಿಂದ ವಿದ್ಯುತ್ ನಿರ್ವಹಣೆಗೆ ಹೆಚ್ಚಿನ ನಿಗಾವಹಿಸಲಾಯಿತು. ಪ್ರತಿದಿನ ೨೫ ವಿದ್ಯುತ್ ಕಂಬಗಳನ್ನು ಅಳವಡಿಸ ಲಾಗುತ್ತಿತ್ತು. ಒಂದು ಕಡೆ ವಿದ್ಯುತ್ ಕಂಬಗಳ ಸರಬರಾಜು ಹಾಗೂ ಅವುಗಳನ್ನು ಸ್ಥಳದಲ್ಲಿ ಅಳವಡಿಸುವ ಕೆಲಸ ನಿರ್ವಹಿಸಲಾಗಿದೆ. ಪ್ರಸ್ತುತ ವರ್ಷ ಮಳೆಗಾಲದಲ್ಲಿ ೩,೮೦೦ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಹಾಗೆಯೇ ೧೨೦ ಟ್ರಾನ್ಸ್ಫಾರ್ಮರ್ ಸಹ ದುಸ್ಥಿತಿಗೊಂಡಿದ್ದವು. ಹೊರಗಿನಿಂದ ಲೈನ್‌ಮ್ಯಾನ್‌ಗಳನ್ನು ಸಹ ಜಿಲ್ಲೆಗೆ ನಿಯೋಜನೆ ಮಾಡಿ ಈ ವರ್ಷ ವಿದ್ಯುತ್ ಸಮಸ್ಯೆಯನ್ನು ಜನರಿಗೆ ತೊಂದರೆಯಾಗದAತೆ ನಿರ್ವಹಣೆ ಮಾಡಲು ಪ್ರಯತ್ನಿಸ ಲಾಗಿದೆ ಎಂದು ಪೊನ್ನಣ್ಣ ಅವರು ವಿವರಿಸಿದರು.

(ಮೊದಲ ಪುಟದಿಂದ) ಇದಲ್ಲದೆ ಜಿಲ್ಲೆಗೆ ಬಾಳೆಲೆ, ಹುದಿಕೇರಿ, ಸಿದ್ದಾಪುರ, ಮೂರ್ನಾಡು, ಕಳತ್ಮಾಡು, ಕಾಟಗೇರಿಗಳಿಗೆ ಒಟ್ಟು ೬ ಸ್ಥಳಗಳಿಗೆ ೬೬/೧೧ ಹಾಗೂ ೧೩೨/೧೧ ಕೆ.ವಿ.ಯ ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದ್ದು ಈ ಕಾಮಗಾರಿ ಪೂರ್ಣವಾದರೆ ಮಳೆಗಾಲ ದಲ್ಲಿಯೂ ಸಹ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಲ್ಲದೆ ಭಾಗಮಂಡಲ ಸಂಪಾಜೆಯಲ್ಲಿಯೂ ೩೩ಕೆವಿ, ಹುದಿಕೇರಿಯಲ್ಲಿ ೬೬ ಕೆವಿ ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಗೋಣಿಕೊಪ್ಪ ಚೆಸ್ಕಾಂ ಎ.ಇ. ಸತೀಶ್ ಅವರು ಪೊನ್ನಂಪೇಟೆ ಭಗವತಿ ನಗರದ ವ್ಯಾಪ್ತಿಗೆ ಹೆಚ್ಚುವರಿ ಪರಿವರ್ತಕ ಬೇಕೆಂಬ ಶಾಸಕರ ಸೂಚನೆಯಂತೆ ತ್ವರಿತವಾಗಿ ೬೩ ಕೆವಿಯ ಪರಿವರ್ತಕವನ್ನು ಸ್ಥಾಪನೆ ಮಾಡಿ ವಿದ್ಯುತ್ ವೋಲ್ಟೇಜ್ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಕೊಡಗು ಜಿಲ್ಲೆಗೆ ಪ್ರಪ್ರಥಮ ಬಾರಿಗೆ ವಿದ್ಯುತ್ ಕ್ಷೇತ್ರಕ್ಕೆ ಅತೀ ಹೆಚ್ಚಿನ ಅನುದಾನ ಬಂದಿದೆ. ಕ್ಷೇತ್ರದ ಶಾಸಕರು ಕೊಡಗು ಜಿಲ್ಲೆಯ ಜ್ವಲಂತ ವಿದ್ಯುತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ೩೦ ರಿಂದ ೪೦ ವರ್ಷಗಳ ಹಳೆಯದಾದ ತಂತಿಗಳು ಕಂಬಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಬದಲಾಯಿಸಿ ತುರ್ತು ನಿರ್ವಹಣೆಗೆ ಅಗತ್ಯ ವಿದ್ದಲ್ಲಿ ಮಾರ್ಗವನ್ನು ರಸ್ತೆ ಬದಿಗೆ ಬದಲಾಯಿಸುವ ಯೋಜನೆಗೆ ಮಾನ್ಯ ಇಂಧನ ಸಚಿವ ಅವರೊಂದಿಗೆ ಸಮಾಲೋಚನೆ ನಡೆಸಿ ಚೆಸ್ಕಾಂ ಇಲಾಖೆಗೆ ರೂ. ೨೦೮ ಕೋಟಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಗೋಣಿಕೊಪ್ಪ ವಿದ್ಯುತ್ ಉಪ ವಿಭಾಗಕ್ಕೆ ರೂ. ೫೧ ಕೋಟಿ ಮಂಜೂರಾಗಿದ್ದು, ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ, ಪ್ರಕ್ರಿಯೆ ಮುಗಿದ ನಂತರ ಕಾಮಗಾರಿಯನ್ನು ಕೈಗೆತ್ತಿಕೊಳ್ಳ ಲಾಗುವುದು ಎಂದು ಹೇಳಿದರು.

ಈಗಾಗಲೇ ಬಾಳೆಲೆ, ಹುದಿಕೇರಿಗಳಲ್ಲಿ ತಲಾ ೬೬ ಕೆ..ವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಟೆಂಡರ್ ಆಗಿರುತ್ತದೆ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಭಗವತಿ ನಗರದ ನಿವಾಸಿಗಳಿಂದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಮಾಜಿ ಪ್ರಾಂಶುಪಾಲ ಬಾಚೀರ ಕಾರ್ಯಪ್ಪ ಅವರು ಮಾತನಾಡಿ, ಬಹಳಷ್ಟು ವರ್ಷದಿಂದ ಭಗವತಿ ನಗರದಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ಉಂಟಾಗಿತ್ತು. ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಬಲ್ಬ್ ಉರಿದರೂ ಮನುಷ್ಯರ ಮುಖ ಕಾಣದಷ್ಟು ವೋಲ್ಟೇಜ್ ಸಮಸ್ಯೆ ಇತ್ತು ಇದರಿಂದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಕಷ್ಟವಾಗುತ್ತಿತ್ತು, ಬಹಳಷ್ಟು ವರ್ಷಗಳಿಂದ ಇಲ್ಲಿಗೆ ಹೆಚ್ಚುವರಿ ಟ್ರಾನ್ಸ್ಫಾರ್ಮರ್ ಅಳವಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ, ಆದರೆ ಶಾಸಕರಿಗೆ ಮನವಿ ಕೊಟ್ಟ ಹಲವು ದಿನಗಳಲ್ಲಿ ಈ ಸಮಸ್ಯೆ ಪರಿಹಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಗೋಪಿ, ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಹುದಿಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮತ್ರಂಡ ರೇಖಾ, ಪ್ರಮುಖರಾದ ಮೂಕಳೆರ ಕುಶಾಲಪ್ಪ, ಎರ್ಮು ಹಾಜಿ, ಸಾದಲಿ, ಬಾಜಿ, ಅಹಮದ್, ಬಾಬು, ಸಾಜಿ ಅಚ್ಚುತನ್, ಚಂಗುಲAಡ ಸೂರಜ್, ಮತ್ರಂಡ ಸುಕು, ಮಾಜಿ ಪ್ರಾಂಶುಪಾಲರಾದ ಬಾಚೀರ ಕಾರ್ಯಪ್ಪ, ಚೇರಂಡ ಮೋಹನ್, ಮತ್ತಿತರರು ಇದ್ದರು. (ಅಣ್ಣೀರ ಹರೀಶ್ ಮಾದಪ್ಪ)