ಕಣಿವೆ, ನ. ೨೭: ಭವಿಷ್ಯದ ಬೆಳಕಾಗಿರುವ ವಿದ್ಯಾರ್ಥಿಗಳು ಜ್ಞಾನಾರ್ಜನೆ ಜೊತೆಗೆ ದೇಶಾಭಿಮಾನ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷರೂ ಆದ ಚಿಂತಕ ಬಸವಕುಮಾರ್ ಪಾಟೀಲ್ ಹೇಳಿದರು.

ಬೀದರ್ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅಕ್ಷರ ಜ್ಯೋತಿ ಯಾತ್ರೆಯ ವತಿಯಿಂದ ಕುಶಾಲನಗರ ಪಟ್ಟಣದ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕ ಹಾಗೂ ಪದವಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಮತ್ತು ಉತ್ತಮ ವ್ಯಕ್ತಿತ್ವ ಬೆಳವಣಿಗೆ ಹಾಗೂ ಪರೀಕ್ಷಾ ಫಲಿತಾಂಶದ ಸಫಲತೆಯ ಮಾರ್ಗೋಪಾಯಗಳು ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹುಟ್ಟಿಸಿ, ಉನ್ನತ ಕನಸುಗಳನ್ನು ಬಿತ್ತಿ, ವಿದ್ಯಾರ್ಥಿಗಳಿಗೆ ಪ್ರೇರಣೆ, ಸ್ಫೂರ್ತಿ ನೀಡುವುದರ ಮೂಲಕ ಉನ್ನತ ಸಾಧನೆಯ ಛಲ ಮೂಡಿಸುವುದು. ವಿದ್ಯಾರ್ಥಿಗಳಲ್ಲಿರುವ ಕೀಳರಿಮೆ ಕಿತ್ತು ಹಾಕಿ ವಿದ್ಯಾರ್ಥಿಗಳ ಮನೋಭಾವದಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವುದು ಎಂದು ಅಕ್ಷರ ಜ್ಯೋತಿ ಯಾತ್ರೆಯ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ನಾಗೇಂದ್ರಸ್ವಾಮಿ ಮಾತನಾಡಿ, ಶೈಕ್ಷಣಿಕ ಜಾಗೃತಿ ಹಾಗೂ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಯಾತ್ರೆಯ ಉದ್ದೇಶ ಮತ್ತು ಸಮಾಜದ ಉತ್ತಮ ಬೆಳವಣಿಗೆಗೆ ಇದು ಸಹಕಾರಿಯಾಗಿದೆ ಎಂದರು. ಪ್ರಾಸ್ತಾವಿಕವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿದರು.

ಕನ್ನಡ ಭಾರತಿ ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ, ಜಿಲ್ಲಾ ವೀರಶೈವ -ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್. ನಂದೀಶ್, ನಿವೃತ್ತ ಮುಖ್ಯ ಶಿಕ್ಷಕ ಎಂ.ಎಸ್. ಗಣೇಶ್, ಕುಶಾಲನಗರ ಜೆಸಿಐ ಕಾವೇರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎಂ.ಜಿ. ರಜನಿಕಾಂತ್, ಉಪನ್ಯಾಸಕರು ಇದ್ದರು.